ಹುಣಸೂರು: ತಾಲೂಕಿನ 41 ಗ್ರಾಪಂಗಳ ಪೈಕಿ ಹನಗೋಡು ಗ್ರಾಮ ಪಂಚಾಯ್ತಿ ಶುಚಿತ್ವ, ಶೌಚಾಲಯ ನಿರ್ಮಾಣ, ಸಮರ್ಪಕ ನೀರು ಪೂರೈಕೆ ಸೇರಿದಂತೆ ವಿಶಿಷ್ಟ ಸಾಧನೆಗಾಗಿ 2017-18ನೇ ಸಾಲಿನ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ.
ಹನಗೋಡು ಗ್ರಾಪಂ ವ್ಯಾಪ್ತಿಯ ಹನಗೋಡು, ಗೌಡಿಕೆರೆ ಹಾಗೂ ಕಾಮಗೌಡನಹಳ್ಳಿಗಳ ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಇದುವರೆಗೆ ಗ್ರಾಪಂಗೆ ಬಂದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶಾಲಾ-ಕಾಲೇಜುಗಳ ಅಭಿವೃದ್ಧಿಗೂ ನೆರವಾಗಿದೆ.
ಎಲ್ಲಾ ಗ್ರಾಮಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದೆ. ಹನಗೋಡಿನಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ತೆರಿಗೆ ವಸೂಲಿಯಲ್ಲೂ ಶೇ.80ರಷ್ಟು ವಸೂಲು ಮಾಡಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟಾರೆ 7847 ಮಾನವ ದಿನಗಳನ್ನು ಬಳಸಿ, 120 ಮನೆಗಳ ನಿರ್ಮಾಣ, ಕಾಂಕ್ರೀಟ್ ರಸ್ತೆ, ಚರಂಡಿ-ಡೆಕ್ ನಿರ್ಮಾಣ, ಚೆನ್ನಯ್ಯನ ಕೆರೆ ಅಭಿವೃದ್ಧಿ, ಪದವಿ ಕಾಲೇಜಿನ ಕಾಪೌಂಡ್ ನಿರ್ಮಾಣ, ಹೆಚ್ಚಾಗಿ ಶೌಚಾಲಯ ಹಾಗೂ ಮನೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ.
ಐದು ಲಕ್ಷ ಬಹುಮಾನ: ಸ್ವತ್ಛತೆ, ಶೌಚಾಲಯ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆ, ತೆರಿಗೆ ವಸೂಲಿ, ದಾಖಲೆ ನಿರ್ವಹಣೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಅತ್ಯತ್ತಮ ಸಾಧನೆ ಮಾಡಿದ್ದು, ಜಿಪಂ ಪಂಚತಂತ್ರ ತಂತ್ರಾಂಶದ ಮೂಲಕ ಆಹ್ವಾನಿಸಿದ ಅರ್ಜಿಯಲ್ಲಿ ವಿವರ ಹಾಗೂ ಸಾಧನೆಗಳಲ್ಲಿ 150ಕ್ಕೆ 148 ಅಂಕಗಳಿಸುವ ಮೂಲಕ ಪ್ರಶಸ್ತಿಯೊಂದಿಗೆ 5 ಲಕ್ಷ ರೂ. ಬಹುಮಾನ ಪಡೆದುಕೊಂಡಿದೆ.
ಇಂದು ಪ್ರಶಸ್ತಿ ಪ್ರದಾನ: ಅ.2.ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಗಾಂಧಿ-ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆಂದು ತಾಪಂ ಇಒ ಕೃಷ್ಣಕುಮಾರ್ ತಿಳಿಸಿದರು.