Advertisement

ಗ್ರಾಮ ಪಂಚಾಯತ್‌ ನೌಕರರಿಗೆ ವರ್ಷಕ್ಕೊಮ್ಮೆ ವೇತನ!

11:11 PM Aug 13, 2019 | Lakshmi GovindaRaj |

ಹುಬ್ಬಳ್ಳಿ: ನೌಕರರಿಗೆ ಪ್ರತಿ ತಿಂಗಳು ನೇರ ವೇತನ ನೀಡಬೇಕೆಂಬುದು ಸರ್ಕಾರ ನಿಲುವಾದರೂ, ಇದುವರೆಗೂ ಅದು ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ. ಗ್ರಾಪಂ ನೌಕರರು ಐದಾರು ತಿಂಗಳಿಗೊಮ್ಮೆ, ಕೆಲವೊಂದು ಕಡೆ ವರ್ಷವಾದರೂ ವೇತನ ಪಡೆಯದೆ ಸಂಕಷ್ಟ ಎದುರಿಸುವಂತಾಗಿದೆ.

Advertisement

ಗ್ರಾಪಂ ಆಡಳಿತದ ಆಧಾರಸ್ತಂಭ ರೂಪದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಏಳೆಂಟು ತಿಂಗಳವರೆಗೆ, ವರ್ಷದವರೆಗೆ ವೇತನ ಇಲ್ಲದೆ ಬದುಕು ಸಾಗಿಸುವುದಾದರೂ ಹೇಗೆ ಎಂಬ ಸಣ್ಣ ಚಿಂತನೆಯೂ ಸರ್ಕಾರಕ್ಕೆ ಇಲ್ಲ. ಗ್ರಾಪಂಗಳಿಂದಲೇ ಈ ಸಿಬ್ಬಂದಿಗೆ ವೇತನ ನೀಡಲಾಗುತ್ತಿದ್ದು, ಗ್ರಾಪಂನವರು ನೀಡಿದಾಗಲೇ ವೇತನ. ಸಂಕಷ್ಟ ಹೇಳಿಕೊಳ್ಳುವಂತಿಲ್ಲ, ನುಂಗಿ ಬದುಕು ಸಾಗಿಸುವಂತೆಯೂ ಇಲ್ಲದ ಸ್ಥಿತಿ ಗ್ರಾಪಂ ನೌಕರರದ್ದಾಗಿದೆ.

ಗ್ರಾಪಂನಲ್ಲಿ ಕ್ಲರ್ಕ್‌, ಬಿಲ್‌ ಕಲೆಕ್ಟರ್‌, ಕಂಪ್ಯೂಟರ್‌ ಆಪರೇಟರ್‌, ವಾಟರ್‌ಮನ್‌ ಹಾಗೂ ಸಿಪಾಯಿ ಸಿಬ್ಬಂದಿ ಇದ್ದು, ಯಾವುದೇ ಹೆಚ್ಚಿನ ಸೌಲಭ್ಯ ಇಲ್ಲದೆ, ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸಬೇಕಾಗಿದೆ. ರಾಜ್ಯದಲ್ಲಿ ಸುಮಾರು 6042 ಗ್ರಾಪಂಗಳು ಇದ್ದು, ಬಹು ತೇಕ ಗ್ರಾಪಂಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಆಗುವುದು ದುಸ್ತರ ಎನ್ನುವಂತಿದೆ. ವೇತನ ಕೈಗೆ ಬಂದಾಗಲೇ ಹಬ್ಬ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ದಿನಗೂಲಿ ಹಾಗೂ ಗುತ್ತಿಗೆಯಾಧಾರಿತ ನೌಕರರಿಗೆ ಕಾಯಂ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ನೀಡಬೇಕೆಂಬ ಹೋರಾಟದ ಫ‌ಲವಾಗಿ ರಾಜ್ಯ ಸರ್ಕಾರ 2013ರಲ್ಲಿ ಕಾಯ್ದೆಯೊಂದನ್ನು ಜಾರಿಗೊಳಿಸಿದೆ. ಸುಮಾರು 23 ಸಾವಿರದಷ್ಟು ದಿನಗೂಲಿ ನೌಕರರಿಗೆ ಕಾಯಂ ಸಿಬ್ಬಂದಿ ಪಡೆಯುವ ಸೌಲಭ್ಯಗಳಲ್ಲಿ ಶೇ.90 ಸೌಲಭ್ಯಗಳು ದೊರೆಯುವಂತೆ ಮಾಡಲಾಗಿತ್ತು.

ಕೆಲಸಕ್ಕೆ ಬಾರದ ಕಾಯ್ದೆ: 2013ರ ಕಾಯ್ದೆ ಅನ್ವಯ ಸೌಲಭ್ಯ ಪಡೆದ ಸಿಬ್ಬಂದಿಗೂ ಪ್ರತಿ ತಿಂಗಳು ವೇತನ ದೊರೆಯದೆ, ಐದಾರು ತಿಂಗಳಿಗೊಮ್ಮೆ ವೇತನ ದೊರೆಯುತ್ತಿದೆ. ಈ ಕಾಯ್ದೆಗೆ ಒಳಪಡದೇ ಇರುವ ಸಿಬ್ಬಂದಿ ಕಥೆಯಂತೂ ಹೇಳತೀರದಾಗಿದೆ. ಗ್ರಾಪಂ ನೌಕರರ ವೇತನಕ್ಕೆ ವಿಳಂಬ ಹಾಗೂ ತೊಂದರೆ ಆಗಬಾರದು ಎಂದು ರಾಜ್ಯ ಸರ್ಕಾರ ಹಲವು ಕ್ರಮಕ್ಕೆ ಮುಂದಾಗಿತ್ತು. ಎರಡು ವರ್ಷಗಳ ಹಿಂದೆ ಗ್ರಾಪಂ ನೌಕರರಿಗೆ ನೇರ ವೇತನಕ್ಕೊಳಪಡಿಸುವ, ಪ್ರತಿ ತಿಂಗಳು 4ನೇ ತಾರೀಖು ಒಳಗಾಗಿ ವೇತನ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆ ಕ್ರಮ ಕೈಗೊಂಡಿತ್ತು.

Advertisement

ಇದಕ್ಕಾಗಿ ಗ್ರಾಪಂ ಸಿಬ್ಬಂದಿಯಿಂದ ವಿವಿಧ ದಾಖಲೆಗಳು, ಬ್ಯಾಂಕ್‌ ಖಾತೆ ಮಾಹಿತಿ ಪಡೆಯಲಾಗಿತ್ತು. ಇಂದಿಗೂ ನೌಕರರು ಪ್ರತಿ ತಿಂಗಳು ಹಾಗೂ 4ನೇ ತಾರೀಖು ಒಳಗೆ ವೇತನ ಪಡೆಯದಾಗಿದ್ದಾರೆ. ಈಗಲೂ ಪಂಚಾಯತ್‌ ಖಾತೆಯಿಂದಲೇ ಸಿಬ್ಬಂದಿ ಖಾತೆಗೆ ವೇತನ ಜಮಾ ಮಾಡಲಾಗುತ್ತದೆ. ಅದು ಕೆಲವು ಕಡೆ ಐದಾರು ತಿಂಗಳಿದ್ದರೆ, ಇನ್ನು ಕೆಲವು ಕಡೆ ಒಂದು ವರ್ಷದವರೆಗೂ ಇದೆ. ಕೆಲವೊಂದು ಗ್ರಾಪಂಗಳಲ್ಲಿ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಸಿಬ್ಬಂದಿಗೆ ವೇತನ ನೀಡಲಾಗಿದೆ. ಮೇನಿಂದ ಇಲ್ಲಿವರೆಗೆ ವೇತನ ಇಲ್ಲವಾಗಿದೆ.

ಇನ್ನೂ ಕೆಲವೆಡೆ ಅದೂ ಇಲ್ಲವಾಗಿದೆ. ಬರುವ ಹಣವನ್ನು ಸಿಬ್ಬಂದಿ ಸಂಖ್ಯೆಗೆ ಆಧಾರವಾಗಿ ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ಸಿಬ್ಬಂದಿ ಇರುವ ಗ್ರಾಪಂಗಳಲ್ಲಿ ಬಾಕಿ ಪ್ರಮಾಣವೂ ಹೆಚ್ಚಾಗಲಿದೆಯಂತೆ. ಕಂಪ್ಯೂಟರ್‌ ಆಪರೇಟರ್‌ಗಳಿಗೆ ಕೆಲಸ ಹೆಚ್ಚಿನದಾಗಿರುತ್ತದೆ. ಕಂಪ್ಯೂಟರ್‌ ಆಪರೇಟರ್‌ಗಳನ್ನು ಕಾರ್ಯದರ್ಶಿ ಗ್ರೇಡ್‌-2 ಹುದ್ದೆಯಾಗಿ ಪರಿಗಣಿಸಲಾಗುವುದು ಎಂಬ ಸರ್ಕಾರ ಹೇಳಿಕೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ನೋವು ಅನೇಕರದ್ದಾಗಿದೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯೊಂದೇ ಅಲ್ಲ, ಇತರೆ ಇಲಾಖೆಗಳ ಗುತ್ತಿಗೆಯಾಧಾರಿತ ನೌಕರರ ವೇತನ ವಿಳಂಬ ಸಮಸ್ಯೆ-ಸಂಕಷ್ಟವೂ ಹೇಳತೀರದಾಗಿದೆ. ನೌಕರರ ಹಿತದೃಷ್ಟಿಯಿಂದ ಹೋರಾಟದ ಮೂಲಕ 2013ರಲ್ಲಿ ರಾಜ್ಯ ಸರ್ಕಾರ ಕಾಯ್ದೆ ಮಾಡಿದರೂ ಸಿಬ್ಬಂದಿ ಸೌಲಭ್ಯ ಪಡೆಯದ ಸ್ಥಿತಿ ಇದೆ. ಇದೊಂದು ಆಡಳಿತ ಸಮಸ್ಯೆಯಾಗಿದೆ.
-ಡಾ. ಕೆ.ಎಸ್‌. ಶರ್ಮಾ, ಕಾರ್ಮಿಕ ಮುಖಂಡ

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next