Advertisement

ಗ್ರಾಮ ಪಂಚಾಯತಿ ನೌಕರರ ತೀರದ ಬವಣೆ

05:13 PM Jul 09, 2018 | |

ಮುಂಡರಗಿ: ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಯ ಕೆಲಸಗಾರರು ಹೆಚ್ಚುವರಿ ಆಗಿರುವ ಕಾರಣಕ್ಕೆ ಕಾಯಂ ಕೆಲಸದಿಂದ ವಂಚಿತರಾಗುತ್ತಿದ್ದಾರೆ. ಆದರೆ ನಂತರ ಕೆಲಸಕ್ಕೆ ಸೇರಿರುವ ವಾಟರ್‌ಮನ್‌, ಸಿಪಾಯಿ ಮಾತ್ರ ಕಾಯಂ ಕೆಲಸಗಾರರೆಂದು ಅನುಮೋದನೆಗೊಳ್ಳುತ್ತಿರುವುದು ಮಾತ್ರ ವಿಚಿತ್ರ ಸಂಗತಿ. ಅಲ್ಲದೇ ಗ್ರಾಮ ಪಂಚಾಯಿತಿಯ ಕೆಲಸಗಾರರು ಕಳೆದು ಒಂದು ವರ್ಷದಿಂದ ಸಂಬಳ ಇಲ್ಲದೇ ಕೆಲಸ ಮಾಡುತ್ತಾ ದಿನಗಳನ್ನು ದೂಡುತ್ತಿದ್ದಾರೆ.

Advertisement

ಅಲ್ಲದೇ ತಾಲೂಕಿನ ಹದಿನೆಂಟು ಗ್ರಾಮ ಪಂಚಾಯಿತಿಗಳಲ್ಲೂ ಹೆಚ್ಚುವರಿ ಕೆಲಸಗಾರರ ಸಮಸ್ಯೆಯಿದೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಇಬ್ಬರಿಂದ ಮೂರು ಜನ ಹೆಚ್ಚುವರಿ ಗುತ್ತಿಗೆ ಆಧಾರಿತ ಕೆಲಸಗಾರರು ಇದ್ದಾರೆ. ಈ ಹೆಚ್ಚುವರಿ ಕೆಲಸಗಾರರು ಕೆಲಸ ಮಾಡುತ್ತಿದ್ದರೂ, ಹೆಚ್ಚುವರಿ ಎಂಬ ಕಾರಣದಿಂದ ಕಾಯಂ ನೌಕರರಾಗುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. 

ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ಗ್ರೇಡ್‌-1 ಪಂಚಾಯತಿಯಾಗಿದೆ. ಈ ಪಂಚಾಯಿತಿಯಲ್ಲಿ ಕಳೆದ ಎರಡು ಮೂರು ದಶಕಗಳ ಕಾಲ ನಮ್ಮ ಪಾಲಕರು ಕಡಿಮೆ ಸಂಬಳದಲ್ಲಿ ಸ್ವಚ್ಛತಾ ಕೆಲಸಗಾರಾಗಿ ದುಡಿದರೂ ಕಾಯಂ ನೌಕರಿ ಆಗಲಿಲ್ಲ. ಪಿಯುಸಿ ಉತ್ತೀರ್ಣವಾಗಿರುವ ತಾವು 2012ರಲ್ಲಿಯೆ ಗ್ರಾಮ ಪಂಚಾಯತಿಗೆ ಸ್ವಚ್ಛತೆಯ ಕೆಲಸಗಾರನಾಗಿ ನೇಮಕವಾಗಿದ್ದು, ಆದರೆ ಅಧಿಕಾರಿಗಳು ಮಾತ್ರ ನಮ್ಮನ್ನು ಕಾಯಂ ಆಗಿ ಸ್ವಚ್ಛತೆ ಕೆಲಸಗಾರರನ್ನಾಗಿ ಉಳಿಸಿಬಿಟ್ಟಿದ್ದಾರೆ. ಸ್ವಚ್ಛತೆಯ ನಮ್ಮ ನೌಕರಿಯು ಕಾಯಂ ಆಗಲೇಯಿಲ್ಲ. ಜೊತೆಗೆ ನಮಗಿಂತ ತಡವಾಗಿ ಗುತ್ತಿಗೆ ಕೆಲಸಗಾರರಾಗಿ ಸೇರ್ಪಡೆಯಾಗಿರುವ ಎಂಟನೆಯ ತರಗತಿಯನ್ನು ಪೂರ್ಣಗೊಳಿಸಿದವರು ವಾಟರ್‌ಮನ್‌, ಸಿಪಾಯಿ ಆಗಿ ಕಾಯಂ ನೌಕರರಾದರು. ನಾವು ಮಾತ್ರ ದಶಕದಿಂದ ಹೆಚ್ಚುವರಿ ಸಿಬ್ಬಂದಿಯಗಿ ಉಳಿದುಕೊಮಡು ಬಿಟ್ಟೇವು. ಅಧಿಕಾರಿಗಳು ಹೊಸದಾಗಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳದೆ ಇದ್ದರೇ,ನಮ್ಮ ನೌಕರಿಯು ಕಾಯಂ ಆಗುತ್ತಿತ್ತು ಎಂದು ದುಗಡದಿಂದ ಮಾತನಾಡುವ
ಡಂಬಳದ ಚರಂಡಿ ಸ್ವಚ್ಛತಾ ಕೆಲಸಗಾರರಾದ ಸಣ್ಣಿನಿಂಗಪ್ಪ ಗೋವಿನಕೊಪ್ಪ ಮತ್ತು ಬಸವಂತಪ್ಪ ಹರಿಜನರ ಮನದಾಳದ ಮಾತುಗಳು ಆಗಿವೆ.

15ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಐದು ಜನ ಪುರುಷ ಹಾಗೂ ನಾಲ್ಕು ಜನ ಮಹಿಳೆಯರು ಸ್ವಚ್ಛತೆಗಾರರಾಗಿ ಸೇವೆ ಮಾಡುತ್ತಿದ್ದೇವೆ. ನಮ್ಮಲ್ಲಿ ಮೂವರು ಮಹಿಳೆಯರದ್ದು ಮಾತ್ರ ಕಾಯಂಗೊಳಿಸಲು ಅನುಮೋದನೆಯಾಗಿದೆ. ವಾಟರ್‌ಮನ್‌, ಜವಾನ್‌ ಇತರೆ ಸಿಬ್ಬಂದಿಗಳ ಅನುಮೋದನೆಗೆ ಪಾಲನೆಯಾಗದ ಜನಸಂಖ್ಯೆ ಸ್ವಚ್ಛತಾ ಕೆಲಸಗಾರರ ನೇಮಕದಲ್ಲಿ ಮಾತ್ರ ಯಾಕೆ ತೊಂದರೆಯಾಗುತ್ತಿದೆ. ಕಳೆದ ಒಂದು ವರ್ಷವಾದರೂ ಸಂಬಳ ನೀಡಿಲ್ಲ. ಹೊಟ್ಟಿಗೆ ಏನು ತಿನ್ನಬೇಕು ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎಂದು ಸ್ವಚ್ಛತಾ ಕೆಲಸಗಾರ್ತಿ ಪ್ರೇಮವ್ವ ಬೇವಿನಮರದ ದೂರುತ್ತಾರೆ.

ಗ್ರಾಮ ಪಂಚಾಯಿತಿಯಲ್ಲಿ ಕೆಲಸಗಾರರನ್ನು ಕಾಯಂಗೊಳಿಸಲು ಸರಕಾರದ ಮಾರ್ಗದರ್ಶನದಂತೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ನಿಯಮದ ಪ್ರಕಾರ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಬೇಕು. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಇದ್ದಾರೆ.ಮುಂದಿನ ದಿನಗಳಲ್ಲಿ ಹೆಚ್ಚುವರಿ ಸಿಬ್ಬಂದಿಯು ಕುರಿತಾಗಿ ಸರಕಾರ ನೀಡುವ ಮಾರ್ಗದರ್ಶನದಂತೆ ನಡೆದುಕೊಳ್ಳಲಾಗುವುದು ಎಂದು ತಾಪಂ ಇಓ ಸಿ.ಆರ್‌.ಮುಂಡರಗಿ ಹೇಳುತ್ತಾರೆ.

Advertisement

„ಹು.ಬಾ. ವಡ್ಡಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next