Advertisement

ಗ್ರಾಮ ವಾಸ್ತವ್ಯ ಚುನಾವಣೆ ಗಿಮಿಕ್ಕಲ್ಲ

02:04 PM Aug 18, 2017 | Team Udayavani |

ಕೂಡ್ಲಿಗಿ: ಗ್ರಾಮ ವಾಸ್ತವ್ಯ ನನ್ನ ಕನಸು. ನನ್ನ ಕ್ಷೇತ್ರದ ಜನರ ಸಮಸ್ಯೆ ತಳಮಟ್ಟದಲ್ಲಿ ಬಗೆಹರಿಸುವುದು, ಅವರ ಸಮಸ್ಯೆಗೆ ಧ್ವನಿಯಾಗಲು “ನಮ್ಮ ನಡೆ-ಹಳ್ಳಿ ಕಡೆಗೆ’ಎಂಬ ವಿನೂತನ ಕಾರ್ಯಕ್ರಮ ಮಾಡಿದ್ದೇವೆ ಹೊರತು, ಇದು ಚುನಾವಣೆ ರಣತಂತ್ರವಲ್ಲ ಎಂದು ಶಾಸಕ ಬಿ.ನಾಗೇಂದ್ರ ಸ್ಪಷ್ಟಪಡಿಸಿದರು.

Advertisement

ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ “ನಮ್ಮ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಯಾವುದೇ ಪಕ್ಷ ಮುಖ್ಯವಲ್ಲ. ಅವರ ಸಮಸ್ಯೆಗಳಿಗೆ ಪರಿಹಾರ ಮುಖ್ಯ. ಯಾವುದೇ ಪಕ್ಷದವರಾಗಿದ್ದರೂ ನನಗೆ ಎಲ್ಲರೂ ಒಂದೇ. ನಿಮ್ಮ ಸೇವೆ ಮಾಡುವುದಷ್ಟೇ ನನ್ನ ಗುರಿ. ಇದು ನನ್ನ ರಾಜಕೀಯ ಸಿದ್ಧಾಂತ ಎಂದರು.

ಗ್ರಾಮ ವಾಸ್ತವ್ಯ ಎಂದು ಊರಲ್ಲಿ ಬಂದು ಊಟ ಮಾಡಿ ಮಲಗುವುದಲ್ಲ. ಇಡೀ ತಾಲೂಕು ಆಡಳಿತವೇ ಹಳ್ಳಿಯ ಕಡೆಗೆ ಬಂದಿದ್ದು, ತಾಲೂಕಿನ ಎಲ್ಲ 32 ಇಲಾಖೆಗಳ ಅಧಿಕಾರಿಗಳು ನಿಮ್ಮ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಲಿದ್ದಾರೆ. ನಿಮಗೆ ಅನ್ಯಾಯವಾಗಿದ್ದರೆ ತಾವು ನ್ಯಾಯ ನೀಡಲು ಸಿದ್ಧ. ಆದರೆ ತಾಳ್ಮೆಯಿಂದ ಬಂದು ಸಮಸ್ಯೆ ಹೇಳಿ, ಕೂಡಲೇ ಆಗದಿದ್ದರೆ ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇಂದಿನಿಂದ ಡಿಸೆಂಬರ್‌ ತಿಂಗಳವರೆಗೆ “ನಮ್ಮ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ತಾಲೂಕಿನ 60 ಕಡೆ ಆಯೋಜಿಸಲಾಗುತ್ತಿದ್ದು, ಆಯಾ ಗ್ರಾಪಂ ವ್ಯಾಪ್ತಿಯ ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಸೋಮವಾರ, ಮಂಗಳವಾರ ಬದಲು, ವಾರದಲ್ಲಿ 2 ದಿನ ಮಂಗಳವಾರ ಹಾಗೂ ಶುಕ್ರವಾರ ಕ್ಷೇತ್ರದಾದ್ಯಾಂತ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಡೀ ತಾಲೂಕು ಆಡಳಿತವನ್ನು ಹಳ್ಳಿಗಳ ಕಡೆ ಕೊಂಡೊಯ್ದು ಜನರ ಸಮಸ್ಯೆಗಳಿಗೆ ಪರಿಹರಿಸುವ ಕಾರ್ಯ ಮಾಡಲಿದ್ದೇನೆ ಎಂದರು.

ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಹಳ್ಳಿಗಳ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಯುವಕರು, ಗ್ರಾಮಸ್ಥರು ಸಹಕಾರ ನೀಡಬೇಕು. ತಾವು ಕೂಡ ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿಗಳ ತಳಮಟ್ಟದ ಸಮಸ್ಯೆಗಳನ್ನು ತಿಳಿಯಲು ಪ್ರಯತ್ನಿಸಿದ್ದು, ಜನರ ಸಹಕಾರ ನೀಡಿದರೆ ಸರ್ಕಾರದ ಯೋಜನೆಗಳು ಸಾಕಾರಗೊಳ್ಳುತ್ತವೆ. ಕಾರಣ ಹೇಳುವುದನ್ನು ಬಿಟ್ಟು ಅಭಿವೃದ್ಧಿಯಲ್ಲಿ ನಮ್ಮದು ಜವಾಬ್ದಾರಿ ಇದೆ ಎನ್ನುವುದನ್ನು ತಿಳಿಯಬೇಕೆಂದರು. ಈ ಸಂದರ್ಭದಲ್ಲಿ ವೃದ್ಧಾಪ್ಯ, ಅಂಗವಿಕಲರ ವೇತನ, ಅಂಗವಿಕಲರಿಗೆ ತ್ತೈಸಿಕಲ್‌ ಮುಂತಾದ ಸಮಸ್ಯೆಗಳಿಗೆ ಶಾಸಕರು ಮತ್ತು ಅಧಿಕಾರಿಗಳು
ಸ್ಥಳದಲ್ಲೇ ಪರಿಹಾರ ಸಿಕ್ಕರೆ, ಶೌಚಾಲಯ, ಮನೆ ಮುಂತಾದ ಸಮಸ್ಯೆಗಳಿಗೆ ಬಗೆಹರಿಸುವ ಭರವಸೆ ನೀಡಿದರು. ಜಿಪಂ ಅಧ್ಯಕ್ಷೆ ದೀನಾ ಮಂಜುನಾಥ್‌, ತಾಪಂ ಅಧ್ಯಕ್ಷ ಕೆ.ವೆಂಕಟೇಶ್‌, ಜಿಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ದನ್‌, ತಾಪಂ ಇಒ ಮಂಜುನಾಥ್‌, ಹಶೀಲ್ದಾರ್‌.ಎಲ್‌.ಕೃಷ್ಣಮೂರ್ತಿ,  ತಾಪಂ ಸದಸ್ಯೆ ಸುಧಾ ಪ್ರಾಣೇಶ್‌, ಜಿ.ಪಾಪನಾಯಕ, ಕೆ.ಎಚ್‌.ವೀರನಗೌಡ್ರು, ಜಿ.ಉಮೇಶ್‌, ಕೆ.ಎನ್‌ .ಭೀಮಪ್ಪ, ಗುಡೇಕೋಟೆ ರಾಜಣ್ಣ, ಬಯಲು ತುಂಬರಗುದ್ದಿ ದುರುಗೇಶ್‌, ಜಿ.ಮಲ್ಲಿಕಾರ್ಜುನ, ಮಹೇಶ್‌, ಭಂಗಿ ವಿಜಯಕುಮಾರ್‌, ಜಗದೀಶ್‌, ಗೋವರ್ದನರೆಡ್ಡಿ ಇದ್ದರು.

Advertisement

ಹಳ್ಳಿಗಳಲ್ಲಿ ತಂಬಿಗೆ ಹಿಡಿದುಕೊಂಡು ಮಹಿಳೆಯರು ಬಹಿರ್ದೆಸೆಗೆ ರಸ್ತೆಯ ಕಡೆಗೆ ಹೋಗುತ್ತಿದ್ದಾರೆಂದರೆ ಅವರು ಬೇರೆ ಯಾರು ಅಲ್ಲ, ನನ್ನ ಮನೆಯ ತಾಯಿ, ತಂಗಿ ಎಂದು ತಿಳಿದುಕೊಂಡು ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಮಹಿಳೆಯರ ಗೌರವ ಕಾಪಾಡಿ.
ಡಾ|ಕೆ.ವಿ.ರಾಜೇಂದ್ರ, ಜಿಪಂ ಸಿಇಒ.

Advertisement

Udayavani is now on Telegram. Click here to join our channel and stay updated with the latest news.

Next