Advertisement

ಗ್ರಾಮ ಪಂಚಾಯತ್‌ ಚುನಾವಣೆ : ಶಕ್ತಿ ಪ್ರದರ್ಶನಕ್ಕೆ ಪಕ್ಷಗಳ ಬಿರುಸಿನ ತಯಾರಿ

01:15 AM Sep 18, 2020 | mahesh |

ಮಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಕರಾವಳಿಯಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಬಿರುಸಿನ ತಯಾರಿ ಆರಂಭಗೊಂಡಿದೆ.

Advertisement

ಎರಡೂ ಪಕ್ಷಗಳು ಕೂಡ ತಳ ಮಟ್ಟದಲ್ಲಿ ಪಕ್ಷ ಸಂಘಟನೆಯ ಕಾರ್ಯವನ್ನು ಚುರುಕುಗೊಳಿಸಿದ್ದು, ಕಾರ್ಯಕರ್ತರ ಸಭೆಗಳನ್ನು ಆಯೋಜಿಸುತ್ತಿವೆ. ರಾಜ್ಯ ಚುನಾವಣಾ ಆಯೋಗ ಈಗಾಗಲೇ ಗ್ರಾ.ಪಂ. ಚುನಾವಣೆಗೆ ಪೂರ್ವಭಾವಿ ಪ್ರಕ್ರಿಯೆ ಆರಂಭಿಸಿದ್ದು, ಅಕ್ಟೋಬರ್‌ ಅಂತ್ಯದಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ. ಗ್ರಾ.ಪಂ.ಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ನೇಮಕ, ಮತದಾರರ ಪಟ್ಟಿ ತಯಾರಿ ಕಾರ್ಯ ನಡೆಯುತ್ತಿದೆ.

ಈ ಹಿಂದಿನ ಚುನಾವಣೆ 2015 ಮೇ 29ರಂದು ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,399 ಸ್ಥಾನಗಳ ಪೈಕಿ ಅವಿರೋಧವಾಗಿ ಆಯ್ಕೆಯಾಗಿದ್ದ 109 ಸ್ಥಾನ ಹೊರತುಪಡಿಸಿ ಹಾಗೂ ಉಡುಪಿ ಜಿಲ್ಲೆಯಲ್ಲಿ 2,398 ಸ್ಥಾನಗಳ ಪೈಕಿ ಒಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದ 272 ಸ್ಥಾನಗಳನ್ನು ಹೊರತುಪಡಿಸಿ ಚುನಾವಣೆ ನಡೆದಿತ್ತು.

ದ.ಕ.: 226, ಉಡುಪಿ 154 ಗ್ರಾ.ಪಂ. ದ.ಕ.ದಲ್ಲಿ ಒಟ್ಟು 229 ಗ್ರಾ.ಪಂ.ಗಳಿದ್ದು, ಆಡಳಿತ ಅವಧಿ ಮುಗಿದಿರುವ 226 ಗ್ರಾ.ಪಂ.ಗಳ ಚುನಾವಣೆ
ನಡೆಯಲಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾ.ಪಂ.ನ ಅವಧಿ 2023ರ ಮಾ. 21ಕ್ಕೆ ಹಾಗೂ ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಅರಂಬೋಡು ಗ್ರಾ.ಪಂ.ಗಳ ಅವಧಿ 2021ರ ಮೇ 15ರ ವರೆಗೆ ಇದೆ. ಉಡುಪಿಯಲ್ಲಿ ಒಟ್ಟು 158 ಗ್ರಾ.ಪಂ.ಗಳ ಪೈಕಿ ಬೈಂದೂರು, ಯಡ್ತೆರೆ, ಪಡುಸಾರಿ ಪಟ್ಟಣ ಪಂಚಾ ಯತ್‌ ಆಗಿದೆ. ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ 2019ರಲ್ಲಿ ಚುನಾವಣೆ ನಡೆದಿತ್ತು. ಅಧಿಕಾರಾವಧಿ ಮುಗಿದಿರುವ 154 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.

ಬೂತ್‌ ಸಮಾವೇಶ
ಪಕ್ಷಾತೀತ ಎಂದು ಬಿಂಬಿಸಿಕೊಂಡು ನಡೆಯುತ್ತಿರುವ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಬಲವನ್ನು ಒರೆಗೆ ಹಚ್ಚಲು ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ರಾಜಕೀಯ ಕಾರ್ಯತಂತ್ರಗಳು ಈಗಾಗಲೇ ಪ್ರಾರಂಭಗೊಂಡಿವೆ. ಗ್ರಾಮ ಮಟ್ಟದಲ್ಲಿ ಪ್ರಭಾವಿ ಹಾಗೂ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಆರಂಭ ಗೊಂಡಿದೆ. ಬೂತ್‌ ಹಾಗೂ ಗ್ರಾಮ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ, ಪರಿಸ್ಥಿತಿಯ ಅವಲೋಕನ ಸಭೆ ಆರಂಭಗೊಂಡಿದೆ.

Advertisement

ದಕ್ಷಿಣ ಕನ್ನಡದಲ್ಲಿ 1,916 ಹಾಗೂ ಉಡುಪಿ ಜಿಲ್ಲೆಯಲ್ಲಿ 1,111 ಬೂತ್‌ಗಳಿವೆ. ಜಿಲ್ಲಾ ಮಟ್ಟದ ಹಾಗೂ ಪದಾಧಿಕಾರಿಗಳಿಗೆ ವಿಧಾನಸಭಾ ಕ್ಷೇತ್ರ, ಬ್ಲಾಕ್‌, ಗ್ರಾಮ ಹಾಗೂ ಬೂತ್‌ ಮಟ್ಟದ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ.

ಗ್ರಾಮ ಪಂಚಾಯತ್‌ ಚುನಾವಣೆಗೆ ಬಿಜೆಪಿಯಿಂದ ವ್ಯಾಪಕ ಸಿದ್ಧತೆ ಆರಂಭಗೊಂಡಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಗ್ರಾಮ ಹಾಗೂ ಬೂತ್‌ಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಲಾಗಿದ್ದು ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಿ ಚುನಾವಣೆಗೆ ಪಕ್ಷವನ್ನು ಸಜ್ಜು ಗೊಳಿಸುವ ಕಾರ್ಯ ನಡೆದಿದೆ. ಪಕ್ಷದ ವಿವಿಧ ಮೋರ್ಚಾ, ಪ್ರಕೋಷ್ಠಗಳ ಪ್ರಮುಖರಿಗೆ ಪಂಚಾಯತ್‌ ಮಟ್ಟದ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದೆ. ಬೂತ್‌ ಹಾಗೂ ಶಕ್ತಿ ಕೇಂದ್ರ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಗಳ ಗುರುತಿ ಸುವಿಕೆ ಪ್ರಕ್ರಿಯೆ ನಡೆಯುತ್ತಿದೆ.
– ಸುದರ್ಶನ್‌ ಮೂಡುಬಿದಿರೆ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ
– ಸುರೇಶ್‌ ನಾಯಕ್‌, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ

ಗ್ರಾ.ಪಂ. ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು ಗ್ರಾಮ ಹಾಗೂ ಬೂತ್‌ ಮಟ್ಟದಲ್ಲಿ ಸಮಿತಿಗಳನ್ನು ಬಲಪಡಿಸಿ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ. ರಾಜ್ಯ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಈಗಾಗಲೇ ಜಿಲ್ಲೆಗೆ ಆಗಮಿಸಿ ಸಭೆಗಳನ್ನು ನಡೆಸಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಗ್ರಾಮದಲ್ಲಿ “ಒಂದು ದಿನ’, “ಒಂದು ಪುಟ, ಒಂದು ಕುಟುಂಬ’ ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಂಡು ಗ್ರಾಮ ಹಾಗೂ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ.
– ಕೆ. ಹರೀಶ್‌ ಕುಮಾರ್‌, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
– ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next