Advertisement

“ಗ್ರಾಮ ಒನ್‌’ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

06:16 PM Jan 27, 2022 | Team Udayavani |

ಹಾವೇರಿ: ಗ್ರಾಮೀಣ ಜನರ ಬದುಕಿನಲ್ಲಿ ಬದಲಾವಣೆ ತಂದು ಉನ್ನತೀಕರಿಸುವ ಮೂಲಕ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಒದಗಿಸೋಣ. “ಗ್ರಾಮ ಒನ್‌’ ಸೇವೆ ಇಡೀ ಜನಮಾನಸದಲ್ಲಿ ಉಳಿಯಬೇಕು ಹಾಗೂ ಜನರ ಬದುಕು ನಂಬರ್‌ ಒನ್‌ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬೆಂಗಳೂರಿನಿಂದ ಬುಧವಾರ ಮುಖ್ಯಮಂತ್ರಿಗಳು ಶಿಗ್ಗಾವಿ ತಾಲೂಕು ಎನ್‌. ಎಂ.ತಡಸ ಗ್ರಾಮ ಪಂಚಾಯತಿಯಲ್ಲಿನ ಗ್ರಾಮ ಒನ್‌ ಸೇವಾ ಕೇಂದ್ರ ಸೇರಿದಂತೆ ರಾಜ್ಯದ 12 ಜಿಲ್ಲೆಗಳ ಸುಮಾರು 3000 ಗ್ರಾಮ ಒನ್‌ ಕೇಂದ್ರಗಳನ್ನು ವರ್ಚುಯಲ್‌ ಮಾದರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಸಣ್ಣ ಸಣ್ಣ ಅವಶ್ಯಕತೆಗಳಾದ ಹೊಲ-ಮನೆ ಪತ್ರ, ಹಕ್ಕು ಪತ್ರ, ಆದಾಯ-ಜಾತಿ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಪಡಿತರ ಚೀಟಿ ಬ್ಯಾಂಕಿಂಗ್‌ ಸೇವೆ ಸೇರಿದಂತೆ ದಿನನಿತ್ಯದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್‌ ಕೇಂದ್ರ ಆರಂಭಿಸಿದ್ದು ಸಂತೋಷವಾಗಿದೆ. ಇದು ಯಶಸ್ವಿಯಾದಾಗ ಸಮಾಧನವಾಗುತ್ತದೆ ಎಂದರು.

ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಆರಂಭಿಸಿ, ಅಲ್ಲಿ ಉಂಟಾದ ತೊಂದರೆ, ಸಮಸ್ಯೆಗಳನ್ನು ಸರಿಪಡಿಸಿ ಸರಳೀಕರಣಗೊಳಿಸಲಾಗಿದೆ. ಈಗ 12 ಜಿಲ್ಲೆಗಳ 3000 ಕೇಂದ್ರಗಳಲ್ಲಿ ಆರಂಭಿಸಲಾಗುತ್ತಿದೆ. ಜನರಿಗೆ ಅಗತ್ಯ ಸೇವೆಗಳನ್ನು ತಲುಪಿಸುವಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ ವಿಶ್ವಾಸ ಮರು ಸ್ಥಾಪನೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಈಗಾಗಲೇ 6 ಲಕ್ಷ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ನೀಡಲಾಗಿದೆ. ಯೋಜನೆಯಲ್ಲಿ ನಿರಂತರ ಸುಧಾರಣೆ ತರುವ ಮೂಲಕ ಯಾವುದೇ ಲೋಪವಾಗದಂತೆ ಸಮರ್ಪಕ ಸೇವೆ ನೀಡಬೇಕು. ಜನಪ್ರತಿನಿಧಿಗಳು ಜನರಿಗೆ ಈ ಯೋಜನೆ ಮಾಹಿತಿ ನೀಡಬೇಕು. ಯೋಜನೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

Advertisement

ಇದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಬರುವ ದಿನಗಳಲ್ಲಿ ಈ ಕೇಂದ್ರಗಳ ಬಳಕೆ ಹೆಚ್ಚಾಗಲಿದ್ದು, ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಈ ಯೋಜನೆಯ ಯಶಸ್ಸಿಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ  ಧಿಕಾರಿಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ಕಾರ್ಮಿಕ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್‌ ಶಿವರಾಮ ಹೆಬ್ಟಾರ ಅವರು, ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ರಹವಾಸಿ ಪ್ರಮಾಣ ಪತ್ರ, ಪಹಣಿ, ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಿಸಿ ಮಾತನಾಡಿ, ಮಹಾತ್ಮಾ ಗಾಂಧಿಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಇಂದು ನನಸಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಸಾಮಾನ್ಯ ಜನರ ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ ಯೋಜನೆ ಜಾರಿಗೆ ತಂದಿದೆ. ಇದರಿಂದ ಸುಲಭವಾಗಿ ಸೇವೆಗಳು ದೊರೆಯಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ. 750 ಪ್ರಕಾರದ ಸೇವೆಗಳನ್ನು ನೀವು ವಾಸಿಸುವ ಸ್ಥಳದಿಂದಲೇ ಪಡೆಯಬಹುದು. ಇಂತಹ ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿಗಳಿಗೆ ಕೃತಜ್ಞನತೆ ಸಲ್ಲಿಸುತ್ತೇನೆ ಎಂದರು.

ಜಿಪಂ ಸಿಇಒ ಮಹಮ್ಮದ ರೋಷನ್‌ ಮಾತನಾಡಿ, ಜಿಲ್ಲೆಯ 278 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್‌ ಕೇಂದ್ರ ಆರಂಭಿಸಲಾಗುತ್ತಿದೆ. ಗ್ರೇಡ್‌-1 ಗ್ರಾಮ ಪಂಚಾಯತಿಗಳಲ್ಲಿ ಎರಡು ಹಾಗೂ ಗ್ರೇಡ್‌-2 ಗ್ರಾಮ ಪಂಚಾಯತಿಗಳಲ್ಲಿ ಒಂದು ಗ್ರಾಮ ಒನ್‌ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಗ್ರಾಮಸ್ಥರು ಈ ಸೇವಾ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಪರ ಜಿಲ್ಲಾಧಿಕಾರಿ ಡಾ.ಎನ್‌ .ತಿಪ್ಪೇಸ್ವಾಮಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಶಿಗ್ಗಾವಿ ತಹಶೀಲ್ದಾರ್‌ ಶಿವಾನಂದ ರಾಣೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಪಿಸುವ ನಿಟ್ಟಿನಲ್ಲಿ ಗ್ರಾಮ ಒನ್‌ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಿಂದ ಹಣ, ಸಮಯ ಉಳಿತಾಯವಾಗಲಿದೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಸಹ ತಪ್ಪಲಿದೆ. ತಾಲೂಕು ಕಚೇರಿಗಳ ಒತ್ತಡ ಕಡಿಮೆ ಮಾಡಲಾಗಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next