ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಅಪಾರ. ಸಕಾಲದಲ್ಲಿ ಕೊಯ್ಲು, ಒಕ್ಕಣೆ ಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈಗ ಕೊಯ್ಲು ಮಾಡುವ ಯಂತ್ರಗಳೂ ಬಂದಿವೆ. ಒಕ್ಕಣೆ ನಂತರ ಧಾನ್ಯ ಶುದ್ಧೀಕರಿಸುವ ಯಂತ್ರಗಳೂ ಬಂದಿವೆ. ಇವುಗಳು ದೊಡ್ಡ, ಮಧ್ಯಮ ಮತ್ತು ಸಣ್ಣ ಪ್ರಮಾಣದಲ್ಲಿ ದೊರೆಯುತ್ತವೆ. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೃಷಿ ಯಂತ್ರೋಪಕರಣಗಳ ವಿನ್ಯಾಸ ಮಾಡುವ ತಜ್ಞರು ಸಣ್ಣ ರೈತರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಅವರಿಗೆ ಅನುಕೂಲಕರವಾದ ರೀತಿಯಲ್ಲಿ ಸಾಕಷ್ಟು ಕೃಷಿಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಇವುಗಳಲ್ಲಿ “ಧಾನ್ಯ ತೂರುವ ಯಂತ್ರ’ವೂ ಸೇರಿದೆ.
ಒಕ್ಕಣೆ ಮಾಡಿದ ನಂತರ ಧಾನ್ಯಗಳನ್ನು ಶುದ್ಧೀಕರಿಸಲು ತೂರಲಾಗುತ್ತದೆ. ಇದು ಒಕ್ಕಣೆ ಮಾಡಿದ ತಕ್ಷಣವೇ ಆಗಬೇಕಾದ ಕೆಲಸ. ಸಕಾಲದಲ್ಲಿ ಇದು ಆಗದಿದ್ದರೆ ರೈತರು ಉಳಿದ ಕೃಷಿ ಕೆಲಸಕಾರ್ಯಗಳತ್ತ ಗಮನ ನೀಡಲು ಆಗುವುದಿಲ್ಲ. ಕೆಲವೆಡೆ ಸ್ಥಳೀಯವಾಗಿಯೇ ಅಭಿವೃದ್ಧಿಗೊಳಿಸಿದ ಧಾನ್ಯ ತೂರುವ ಯಂತ್ರಗಳಿವೆ. ಆದರೆ ಇವುಗಳು ಸುರಕ್ಷತಾ ಮಾನದಂಡಗಳನ್ನು ಹೊಂದಿರುವುದಿಲ್ಲ. ಕೃಷಿ ವಿಶ್ವವಿದ್ಯಾಲಯ
ವಿನ್ಯಾಸಗೊಳಿಸಿರುವ ಧಾನ್ಯ ತೂರುವ ಯಂತ್ರ, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಯಾರಾಗಿದೆ. ಇದರ ಜೊತೆಗೆ ಒಂದೆಡೆಯಿಂದ ಮತ್ತೂಂದೆಡೆಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುವಂಥ ರೀತಿಯಲ್ಲಿ ಧಾನ್ಯ ತೂರುವ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಗಮನಾರ್ಹ ಸಂಗತಿಯೆಂದರೆ ಈ ಯಂತ್ರ ಕೇವಲ ಒಂದು ಹೆಚ್.ಪಿ.(ಅಶ್ವಶಕ್ತಿ)ಯಿಂದ ಚಾಲನೆಗೊಳ್ಳುತ್ತದೆ. ರಭಸದಿಂದ ಗಾಳಿ ಬೀಸುವಂತೆ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದನ್ನು ಬಳಸಿ ಪ್ರತಿ ಗಂಟೆಗೆ 6ರಿಂದ 8 ಕ್ವಿಂಟಾಲ್ ಧಾನ್ಯವನ್ನು ಶುದ್ಧೀಕರಿಸಬಹುದು. ಇದರ ಬೆಲೆ ಸುಮಾರು 18 ಸಾವಿರ ರು. ನಾಲ್ಕೈದು ರೈತರು ಜೊತೆಗೂಡಿ ಈ ಖರ್ಚನ್ನು ಹಂಚಿಕೊಂಡರೆ ಹೊರೆಯಾಗದು. ಬಾಳಿಕೆಯೂ ದೀರ್ಘಕಾಲ.
– ಕುಮಾರ ರೈತ