ಗದಗ: ಗ್ರೇನ್ ಮಾರ್ಕೆಟ್ ಅಗ್ನಿ ಅವಘಡದಲ್ಲಿ ಹಾನಿಗೊಳಗಾದ ಅಂಗಡಿಕಾರರಿಗೆ ಸರಕಾರದಿಂದ ಪರಿಹಾರ ಕಲ್ಪಿಸ ಬೇಕು ಎಂದು ಒತ್ತಾಯಿಸಿ ಬುಧವಾರ ಗ್ರೇನ್ ಮಾರ್ಕೆಟ್ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗ್ರೇನ್ ಮಾರ್ಕೆಟ್ ಸಮೀಪದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಬಳಿಕ ಪಂಚರ ಹೊಂಡ, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ಸರ್ಕಲ್ ಮಾರ್ಗವಾಗಿ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನೆ ನಡೆಸಿದರು.
ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 55ಅಂಡಿಗಳು ಬೆಂಕಿಗಾಹುತಿಯಾಗಿದ್ದು, ಸುಮಾರು ಒಂದು ಕೋಟಿ ರು. ಮೌಲ್ಯದ ವಸ್ತುಗಳು ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸರಕಾರದಿಂದ ಪರಿಹಾರ ಕಲ್ಪಿಸಬೇಕು. ಹಾನಿಗೀಡಾದ ಅಂಗಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಾರುಕಟ್ಟೆ ಸ್ತಬ್ಧ: ಸದಾ ಗ್ರಾಹಕರಿಂದ ಗಿಜಿಗುಡುತ್ತಿದ್ದ ಇಲ್ಲಿನ ಗ್ರೇನ್ ಮಾರುಕಟ್ಟೆ ವರ್ತಕರ ಮುಷ್ಕರದಿಂದಾಗಿ ಬುಧವಾರ ಸ್ತಬ್ಧಗೊಂಡಿದೆ. ಎಂದಿನಂತೆ ಕೆಲ ಅಂಗಡಿಗಳ ಬಾಗಿಲು ತೆರೆದಿದ್ದರೂ, ಪ್ರತಿಭಟನಾಕಾರರ ಮನವಿ ಮೇರೆಗೆ ಎಲ್ಲ ವರ್ತಕರು ವಹಿವಾಟು ಸ್ಥಗಿತಗೊಳಿಸಿದರು. ಇದರಿಂದಾಗಿ ಮಾರುಕಟ್ಟೆಯಲ್ಲಿ ಜನರಿಲ್ಲದೇ ಬಣಗೊಡುತ್ತಿತ್ತು.