Advertisement

ಗ್ರಹಾಂ ರೀಡ್‌ ಭಾರತ ಹಾಕಿಗೆ ನೂತನ ಕೋಚ್‌

02:45 AM Apr 09, 2019 | sudhir |

ಹೊಸದಿಲ್ಲಿ: ಕಳೆದ 4 ತಿಂಗಳಿನಿಂದ ಕೋಚ್‌ ಇಲ್ಲದೆ ಆಡುತ್ತಿರುವ ಭಾರತೀಯ ಪುರುಷರ ಹಾಕಿ ತಂಡಕ್ಕೆ ಕೊನೆಗೂ ನೂತನ ತರಬೇತುದಾರನ ಆಗಮನವಾಗಿದೆ. ಆಸ್ಟ್ರೇಲಿಯದ ಗ್ರಹಾಂ… ರೀಡ್‌ ಅವರನ್ನು ಹಾಕಿ ಇಂಡಿಯಾ ಕೋಚ್‌ ಆಗಿ ಆಯ್ಕೆ ಮಾಡಿದೆ.

Advertisement

54 ವರ್ಷದ ರೀಡ್‌ ಸದ್ಯದಲ್ಲೇ ಬೆಂಗಳೂರಿನಲ್ಲಿ ಸಾಗುತ್ತಿರುವ ರಾಷ್ಟ್ರೀಯ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ತಮ್ಮ ಅನುಭವದ ಮೂಲಕ ಭಾರತದ ರಾಷ್ಟ್ರೀಯ ಕ್ರೀಡೆಯಲ್ಲಿ ಇನ್ನಷ್ಟು ಅಭಿವೃದ್ಧಿ ತರುವುದು ಇವರ ಗುರಿ.
ಮುಂದಿನ ವರ್ಷದ ವರೆಗೆ ಭಾರತ ತಂಡದೊಂದಿಗೆ ರೀಡ್‌ ಇರಲಿದ್ದು, ಅವರ ಕೋಚಿಂಗ್‌ ಸಾಮರ್ಥ್ಯ ಪರಿಶೀಲಿಸಿದ ಅನಂತರ 2020ರ ಎಫ್ಐಎಚ್‌ ವಿಶ್ವಕಪ್‌ ವರೆಗೆ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

130 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವಿ
ರೀಡ್‌ ಈ ಹಿಂದೆ 2018ರ ಪುರುಷರ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದ ನೆದರ್ಲೆಂಡ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಆಸ್ಟ್ರೇಲಿಯ ರಾಷ್ಟ್ರೀಯ ತಂಡದಲ್ಲಿದ್ದ ರೀಡ್‌ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ತಂಡದ ಸದಸ್ಯರಾಗಿದ್ದರು. ಇದರೊಂದಿಗೆ 1984, 1985, 1989 ಮತ್ತು 1990ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಆಸ್ಟ್ರೇಲಿಯ ತಂಡದಲ್ಲಿಯೂ ರೀಡ್‌ ಇದ್ದರು.

130 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ರೀಡ್‌ 2009ರಲ್ಲಿ ಆಸ್ಟ್ರೇಲಿಯದ ತಂಡದ ಸಹಾಯಕ ಕೋಚ್‌ ಆಗಿ ದುಡಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next