Advertisement

Graduation class: ಪದವಿ ತರಗತಿ ಆರಂಭ ಆ.23ಕ್ಕೆ ಮುಂದೂಡಿಕೆ

09:05 AM Aug 09, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿರುವ 2023-24ನೇ ಸಾಲಿನ ಪದವಿ ಕಾಲೇಜುಗಳ ತರಗತಿ ಆರಂಭವನ್ನು ಆ. 14ರ ಬದಲು ಆ. 23ಕ್ಕೆ ಮುಂದೂಡಿಕೆ ಮಾಡಲು ಮಂಗಳೂರು ವಿ.ವಿ. ನಿರ್ಧರಿಸಿದೆ.

Advertisement

ಕುಲಪತಿ (ಪ್ರಭಾರ) ಪ್ರೊ| ಜಯರಾಜ್‌ ಅಮೀನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿ.ವಿ. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ.

ಈ ಹಿಂದೆ ನಿಗದಿ ಮಾಡಿದಂತೆ ಆ. 14ರಂದು ಪದವಿ ತರಗತಿಗಳು ಆರಂಭವಾಗಬೇಕಿತ್ತು. ಆದರೆ ಮಳೆಯ ಕಾರಣದಿಂದ ರದ್ದಾದ ಪರೀಕ್ಷೆಗಳು ಆ. 14 ಮತ್ತು 16ರಂದು ನಡೆಯಲಿವೆ. ಜತೆಗೆ ಆ. 10ರಿಂದ ಮೌಲ್ಯಮಾಪನ ಆರಂಭಿಸಿ ಆ. 20ರ ವರೆಗೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಆ. 23ರಿಂದ ತರಗತಿ ಪುನರಾರಂಭ ಸೂಕ್ತ ಎಂದು ಮಾತುಕತೆ ನಡೆಸಲಾಗಿದೆ. ಅಂತಿಮ ತೀರ್ಮಾನವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪ್ರೊ| ಜಯರಾಜ್‌ ಅಮೀನ್‌ ತಿಳಿಸಿದರು.

“ಲಿಂಗ ಸಂವೇದನಾಶೀಲತೆ’ಕೋರ್ಸ್‌ಗೆ ಕೊಕ್‌:

ಎನ್‌ಇಪಿ ಪಠ್ಯಕ್ರಮ ಕಾರ್ಯ ಯೋಜನೆಯ 5ನೇ ಸೆಮಿಸ್ಟರ್‌ನಿಂದ “ಜೆಂಡರ್‌ ಸೆನ್ಸಿಟೈಸೇಷನ್‌’ (ಲಿಂಗ ಸಂವೇದ ನಾಶೀಲತೆ) ಕೋರ್ಸ್‌ ಅನ್ನು ಕೈಬಿಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಎನ್‌ಇಪಿ ಪ್ರಕಾರ ಈ ಕೋರ್ಸ್‌ ಅಗತ್ಯ. ಆದರೆ ಅದರ ಕಲಿಕಾ ಶೈಲಿ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಜತೆಗೆ ಬೇರೆ ವಿ.ವಿ.ಯಲ್ಲಿಯೂ ಜಾರಿ ಮಾಡಿಲ್ಲ. ಹೀಗಾಗಿ ಕೋರ್ಸ್‌ ಮಾಡುವ ಬದಲು ಈ ವಿಚಾರದಲ್ಲಿ ಕಾಲೇಜಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದು ಎಂದರು.

Advertisement

ಈ ವರ್ಷವೂ ಎನ್‌ಇಪಿ ಪಠ್ಯಕ್ರಮ: 

ಈ ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಪದವಿ ಪಠ್ಯಕ್ರಮ ಇರಲಿದೆ. ಈಗ ಶೈಕ್ಷಣಿಕ ವರ್ಷ ಆರಂಭದ ಹಂತದಲ್ಲಿರುವುದರಿಂದ ಎನ್‌ಇಪಿ ಪಠ್ಯಕ್ರಮ ಬದಲಾವಣೆ ಸದ್ಯಕ್ಕಿಲ್ಲ. ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವ ಶಿಕ್ಷಣ ನೀತಿ (ಎಸ್‌ಇಪಿ) ಜಾರಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಗೊಂಡಿದೆ. ಈ ವರ್ಷದಿಂದಲೇ ಅನುಷ್ಠಾನಕ್ಕೆ ಸೂಚನೆ ಬಂದಿಲ್ಲ. ಹೀಗಾಗಿ ಈ ಶೈಕ್ಷಣಿಕ ವರ್ಷಕ್ಕೆ ಇದು ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ಪ್ರೊ| ಅಮೀನ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

199.87 ಕೋ.ರೂ. ಬಜೆಟ್‌:

2023-24ನೇ ಸಾಲಿಗೆ 1.75 ಕೋ.ರೂ.ಗಳ ಕೊರತೆಯ ಒಟ್ಟು 199.87 ಕೋ.ರೂ.ಗಳ ಬಜೆಟ್‌ ಅನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸ ಲಾಗಿದೆ. ಹಣಕಾಸು ಅಧಿಕಾರಿ ಪ್ರೊ| ವೈ. ಸಂಗಪ್ಪ ಬಜೆಟ್‌ ಮಂಡಿಸಿದರು. ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ಈಗಗಲೇ ಆರಂಭಗೊಂಡಿರುವ ಯೋಜನೆಗೆ ಸಂಬಂಧಿಸಿದಂತೆ ಇತರ ನಿರ್ಮಾಣ ಯೋಜನೆಗಳಿಗೆ 8 ಕೋ.ರೂ., ವಿ.ವಿ.ಯಲ್ಲಿ ಅಂತಾರಾಷ್ಟ್ರೀಯ ಹಾಸ್ಟೆಲ್‌ ನಿರ್ಮಾಣ, ಕ್ಲಾಸ್‌ ರೂಂ ಕಾಂಪ್ಲೆಕ್ಸ್‌ ಮತ್ತು ಆಡಿಟೋರಿಯಂ ಇಂಟೀರಿ ಯರ್‌ ಕೆಲಸಗಳಿಗೆ 8 ಕೋ.ರೂ. ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಾಗಿ 1 ಕೋ.ರೂ ಹಾಗೂ ವಿ.ವಿ. ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಸೇರಿದಂತೆ 20.90ಕೋ.ರೂ. ಆದ್ಯತೆಯ ಯೋಜನೆಗಳಿಗಾಗಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ಅಧಿಕಾರಿ ತಿಳಿಸಿದ್ದಾರೆ.

ಕುಲಸಚಿವ ರಾಜು ಚಲ್ಲಣ್ಣವರ್‌ ಉಪಸ್ಥಿತರಿದ್ದರು.

ಸ್ನಾತಕೋತ್ತರ ತುಳು ವಿಭಾಗ :

ತುಳು ಭಾಷೆಯಲ್ಲಿ ಈಗ ಪಿಎಚ್‌ಡಿ ಮಾಡಬೇಕಾದರೆ ಕುಪ್ಪಂ ವಿ.ವಿ.ಗೆ ತೆರಳಬೇಕು. ಇಲ್ಲಿಯೇ ತುಳುವಿನಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸ್ನಾತಕೋತ್ತರ ವಿಭಾಗವನ್ನು ಆರಂಭಿಸಲು ನಿರ್ಧರಿಸಲಾಗಿದೆ. ತುಳು ಸಾಹಿತ್ಯದಲ್ಲಿ ಕನ್ನಡ ಲಿಪಿ ಬಳಸುವ ಮೂಲಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ವರೆಗೆ 2010ರಿಂದ 3ನೇ ಭಾಷೆಯಾಗಿ ತುಳುವನ್ನು ಬೋಧಿಸಲಾಗುತ್ತಿದೆ. ಇದರಂತೆ ತುಳು ವಿಭಾಗ ಸ್ಥಾಪನೆಗೆ ಸರಕಾರದ ಅನುಮತಿಗೆ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ;ಶಾಸಕರ ಅಧ್ಯಕ್ಷ ಹುದ್ದೆಗೆ ಕತ್ತರಿ! :

ವಿ.ವಿ. ವ್ಯಾಪ್ತಿಯ 6 ಘಟಕ ಕಾಲೇಜುಗಳ “ಕಾಲೇಜು ಅಭಿವೃದ್ಧಿ ಸಮಿತಿ’ಯಲ್ಲಿ ಇಲ್ಲಿಯವರೆಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿದ್ದರು. ಆದರೆ ವಿ.ವಿ. ಮಂಡಿಸಿರುವ ಹೊಸ ನಿರ್ಣಯದಂತೆ ಇನ್ನು ಮುಂದೆ ಸ್ಥಳೀಯ ಶಾಸಕರು ಅಧ್ಯಕ್ಷರ ಬದಲು ಸದಸ್ಯರಾಗಿ ಮಾತ್ರ ಇರಲಿದ್ದಾರೆ. ಹೊಸ ಪ್ರಸಾವದಂತೆ ವಿವಿ ಕುಲಪತಿಗಳೇ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುತ್ತಾರೆ. ವಿವಿಗೆ ಒಳಪಟ್ಟ ಎಲ್ಲ ಘಟಕ ಕಾಲೇಜುಗಳಿಗೆ ಇದು ಅನ್ವಯವಾಗುತ್ತದೆ. ಈ ನಿರ್ಣಯವು ಹಣಕಾಸು ಸಮಿತಿಯಿಂದ ಅನುಮೋದನೆ ಪಡೆದು ನಂತರ ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಬೇಕಿದೆ.

ಅನುಮೋದಿತ ನಿರ್ಧಾರಗಳು:

*ಕೊಡಗು ಪ್ರತ್ಯೇಕ ವಿ.ವಿ. ರಚನೆ ಹಿನ್ನೆಲೆಯಲ್ಲಿ ಮಡಿಕೇರಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿರುವ ಜೀವರಸಾಯಶಾಸ್ತ್ರ ಹಾಗೂ ಸೂಕ್ಷ್ಮಾಣು ಜೀವವಿಜ್ಞಾನಗಳ ವಿಭಾಗವನ್ನು ಮಂಗಳೂರು ವಿ.ವಿ.ಯಲ್ಲಿ ಸ್ಥಾಪಿಸುವುದು

* ವಿ.ವಿ.ಯಲ್ಲಿ ಸ್ನಾತಕೋತ್ತರ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಸ್ಥಾಪನೆ

*ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕೇತರ ವೃತ್ತಿಗಳಲ್ಲಿ ಬೋಧನೆ-ಸಂಶೋಧನೆ ಮಾಡಿದ ಕೌಶಲ ಪರಿಣತರ ನೇಮಕ

*ವಿ.ವಿ. ಬೋಧಕೇತರ ಹುದ್ದೆಗಳ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ

*ವಿ.ವಿ. ಸ್ನಾತಕೋತ್ತರ ವಾಣಿಜ್ಯ ಕಾರ್ಯಕ್ರಮದ ದ್ವಿತೀಯ ಸೆಮಿಸ್ಟರ್‌ನ ಪಠ್ಯಪುಸ್ತಕ ಪರಿಷ್ಕರಣೆ

Advertisement

Udayavani is now on Telegram. Click here to join our channel and stay updated with the latest news.

Next