Advertisement

Mudhol: ಕೃಷಿಯಲ್ಲೇ ಖುಷಿ ಕಂಡ ಪದವೀಧರರು

11:02 AM Aug 12, 2024 | Team Udayavani |

ಮುಧೋಳ: ಕಾಲೇಜು ಮೆಟ್ಟಿಲು ಹತ್ತಿದರೆ ಸಾಕು ಸರ್ಕಾರಿ ನೌಕರಿ, ನಗರ ಜೀವನ ಬಯಸುವ ಇಂದಿನ ದಿನಮಾನದಲ್ಲಿ ಒಂದೇ ಮನೆಯಲ್ಲಿನ ಮೂವರೂ ಸಹೋದರರು ಪದವಿ ಪೂರೈಸಿದರೂ ಯಾವುದೇ ನೌಕರಿಯ ವ್ಯಾಮೋಹಕ್ಕೆ ಒಳಗಾಗದೆ ಕೃಷಿಯಲ್ಲಿಯೇ ಲಾಭದಾಯಕ ಹಾಗೂ ನೆಮ್ಮದಿ ಜೀವನ ಕಂಡುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

Advertisement

ಜಾಲಿಬೇರಿ ಗ್ರಾಮದ ಚವಾಣ್‌ ಸಹೋದರರಾದ ತಾತ್ಯಾ, ಗೋವಿಂದ ಹಾಗೂ ವಿನೋದ ಚವಾಣ್‌ ಸಹೋದರರು ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಮಾಡುತ್ತ ಅದರಲ್ಲೂ ಮುಖ್ಯವಾಗಿ ತರಕಾರಿ ಬೆಳೆಯತ್ತ ಲಾಭದಾಯಕ ಜೀವನ ನಡೆಸುತ್ತಿದ್ದಾರೆ.

ತಂದೆ ನಾರಾಯಣ ಚವಾಣ್‌ ಅವರು ಮೊದಲಿನಿಂದಲೂ ತರಕಾರಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಅವರ ಹಾದಿಯಲ್ಲಿಯೇ ಸಾಗಿರುವ ಮೂವರು ಸಹೋದರರು ತಮ್ಮ ಮೂರು ಎಕರೆ ಜಮೀನಿನಲ್ಲಿ ಟೊಮ್ಯಾಟೋ, ಹೀರೆ, ಸವತಿ ಹಾಗೂ ಬೆಂಡೆ ತರಕಾರಿ ಬೆಳೆದು ಪ್ರತಿನಿತ್ಯ ಸಾವಿರಾರು ರೂ. ಸಂಪಾದಿಸುತ್ತಿದ್ದಾರೆ.

ಮೂವರೂ ಪದವೀಧರರೇ: ಚವಾಣ್‌ ಸಹೋದರರಲ್ಲಿ ಹಿರಿಯವನಾದ ತಾತ್ಯಾ ಬಿ.ಎ ಪದವಿ ಮುಗಿಸಿದ್ದಾರೆ. ಇನ್ನೋರ್ವ ಸಹೋದರ ಗೋವಿಂದ ಹಾಗೂ ವಿನೋದ ಬಿಕಾಂ ಪದವಿ ಪೂರ್ಣಗೊಳಿಸಿ ನೌಕರಿಯ ಹಂಬಲ ತೊರೆದು ದೀರ್ಘಾವಧಿ ಬೆಳೆಯಾದ ಕಬ್ಬು ಹಾಗೂ ಅಲ್ಪಾವಧಿ ಬೆಳೆಯಾದ ತರಕಾರಿಯ ಬೆಳೆದು ಕೃಷಿಯಲ್ಲಿಯೇ ನೆಮ್ಮದಿ ಜೀವನ ಕಂಡುಕೊಂಡಿದ್ದಾರೆ. ದಿನಂಪ್ರತಿ ತರಕಾರಿ ವಿಲೇವಾರಿ, ಔಷಧಿ ಸಿಂಪಡಣೆ, ಕಟಾವು ಸೇರಿದಂತೆ ಎಲ್ಲ ಬಗೆಯ ಕೆಲಸಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.

ತಾವು ಕಟಾವು ಮಾಡಿದ ತರಕಾರಿಯನ್ನು ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆ ಮಾರುಕಟ್ಟೆಗೆ ಸಾಗಿಸಿ ಹೆಚ್ಚಿನ ಲಾಭಗಳಿಸುತ್ತಾರೆ. ಪ್ರತಿನಿತ್ಯ 8-10 ಮಹಿಳಾ ಕೃಷಿ ಕಾರ್ಮಿಕರೊಂದಿಗೆ ತರಕಾರಿ ಕಟಾವಿನಲ್ಲಿ ತೊಡಗುವ ಸಹೋದರರು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತಲುಪಿಸಿ ತಾಜಾ ತರಕಾರಿ ಮಾರಾಟಕ್ಕೆ ಹೆಸರುವಾಸಿಯಾಗಿದ್ದಾರೆ.

Advertisement

ಕಬ್ಬಿಗೆ ಪೂರಕ ಬೆಳೆ: ಒಟ್ಟು 16 ಎಕರೆ ಜಮೀನು ಹೊಂದಿರುವ ಚವಾಣ್‌ ಸಹೋದರರು ತರಕಾರಿ ಯನ್ನು ಕಬ್ಬಿಗೆ ಪೂರಕ ಬೆಳೆಯೆಂಬಂತೆ ಬೆಳೆಯುತ್ತಾರೆ. ವರ್ಷಪೂರ್ತಿ ಕಬ್ಬಿನಿಂದ ಮುಚ್ಚಿರುವ ಭೂಮಿಯಲ್ಲಿ ಕೆಲ ವರ್ಷ ತರಕಾರಿ ಬೆಳೆದು ಭೂಮಿಯಲ್ಲಿನ ಪೌಷ್ಠಿಕಾಂಶ ಹೆಚ್ಚಿಸುತ್ತಾರೆ. ಇದರಿಂದ ಕಬ್ಬಿಗೆ ಸಾವಯವ ಗೊಬ್ಬರದೊಂದಿಗೆ ಇಳುವರಿ ಹೆಚ್ಚಳಕ್ಕೂ ದಾರಿಯಾಗುತ್ತದೆ ಎನ್ನುತ್ತಾರೆ ಚವಾಣ್‌ ಸಹೋದರರು.

3ದಶಕದ ಸುದೀರ್ಘ‌ ನಂಟು: ಇನ್ನು ಚವಾಣ್‌ ಮನೆತನದ ಹಿರಿಯನಾದ ನಾರಾಯಣ ಚವಾಣ್‌ ಅವರು ತಮ್ಮ ತಿಳಿವಳಿಕೆ ದಿನಮಾನ ದಿಂದಲೂ ತರಕಾರಿ ಬೆಳೆಯಲ್ಲಿ ಆಸಕ್ತಿ ಬೆಳೆಸಿ ಕೊಂಡು ಬಂದವರು. ದೀರ್ಘಾವಧಿಯಿಂದ ತರಕಾರಿ ಬೆಳೆಯನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡಿರುವ ಇವರು ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ. ದೀರ್ಘಾವಧಿ ಬೆಳೆಯಾಗಿರುವ ಕಬ್ಬು ಹೊರತುಪಡಿಸಿ ತರಕಾರಿಗೆ ಬೆಳೆಗೆ ಹೆಚ್ಚಿನ ಒತ್ತು ನೀಡಿ ಆ ಮೂಲಕ ಆರ್ಥಿಕ ಸಬಲತೆಯನ್ನು ಸಾಧಿ ಸಿಕೊಂಡಿದ್ದಾರೆ.

ಸದ್ಯ ಅರ್ಧ ಎಕರೆ ಟೊಮ್ಯಾಟೋ, ಅರ್ಧ ಎಕರೆ ಹೀರೆ, ಅರ್ಧ ಎಕರೆ ಸವತೆ ಹಾಗೂ ಒಂದೂವರೆ ಎಕರೆಯಲ್ಲಿ ಬೆಂಡೆ ಬೆಳೆಯುತ್ತಿ ರುವ ಇವರು ನಿತ್ಯ ಬೇರೆ ಬೇರೆ ಮಾರುಕಟ್ಟೆಗೆ ತೆರಳಿ ತರಕಾರಿ ಮಾರಾಟ ಮಾಡುತ್ತಾರೆ.

ವಿದ್ಯಾಭ್ಯಾಸ ಮುಗಿದ ಬಳಿಕ ನೌಕರಿಗಾಗಿ ಬೇರೆಡೆ ಅಲೆಯುವುದಕ್ಕಿಂತ ನಮ್ಮ ಜಮೀನಿನಲ್ಲಿಯೇ ಪರಿಶ್ರಮದಿಂದ ದುಡಿದರೆ ನೆಮ್ಮದಿಯ ಜೀವನ ಸಾಗಿಸಬಹುದು. ನಮ್ಮ ಕೃಷಿ ಪದ್ಧತಿಯಲ್ಲಿ ಸುಧಾರಿತ ವ್ಯವಸ್ಥೆ ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆಯಬಹದು. – ವಿನೋದ ಚವಾಣ್‌, ಬಿಕಾಂ ಪದವೀಧರ ಕೃಷಿಕ

ತರಕಾರಿ ಬೆಳೆಯಲ್ಲಿ ಕಬ್ಬಿಗಿಂತ ಹೆಚ್ಚಿನ ಲಾಭವಿದೆ. ಪರಿಶ್ರಮ ಹಾಕಿ ಬೆಳೆಯುವ ತರಕಾರಿಯಿಂದ ನಿತ್ಯದ ಜೀವನಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ.  ಗೋವಿಂದ ನಾರಾಯಣ ಚವಾಣ್‌, ಬಿಕಾಂ ಪದವೀಧರ ಕೃಷಿಕ

– ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next