Advertisement

ಪದವೀಧರ ಶಿಕ್ಷಕರಿಗೇ ಮುಂಬಡ್ತಿ ನೀಡಲು ಒತ್ತಾಯ

01:28 PM Jun 30, 2019 | Suhan S |

ಮಂಡ್ಯ: ಪದವಿ ವಿದ್ಯಾರ್ಹತೆ ಮತ್ತು ಸೇವಾ ಅನುಭವ ಇರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಸೇರ್ಪಡೆಗೊಳಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪ್ರತಿಭಟಿಸಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

Advertisement

ವರ್ಗೀಕರಿಸಿದರೆ ಅನ್ಯಾಯ: ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ನಡೆಸಿದ ಶಿಕ್ಷಕರು, ಡಿಡಿಪಿಐ ಕಚೇರಿ ವರೆಗೆ ಮೆರವಣಿಗೆ ನಡೆಸಿ ಸೇವಾನಿರತ ಪದವೀಧರ ಶಿಕ್ಷಕರು 2005ರಿಂದಲೂ 6-8ನೇ ತರಗತಿಗಳಿಗೆ ಬೋಧಿಸುತ್ತಿದ್ದಾರೆ. ಆದರೆ, 2014ರ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು (1-5) ವೃಂದದಲ್ಲಿ ವರ್ಗೀಕರಿಸಿರುವುದರಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬಡ್ತಿ ನೀಡಿ: ಹೊಸ ವೃಂದ ಮತ್ತು ವೃಂದಬಲ ಆದೇಶ ಇಡಿ 626 ಪಿಬಿಎಸ್‌ 2014ಮ 2017ರ ಮೇ 19ರ ಆದೇಶ ತಿದ್ದುಪಡಿ ಮಾಡಿ ಸೇವೆಯಲ್ಲಿರುವ 82 ಸಾವಿರ ಪದವೀಧರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8) ವೃಂದಕ್ಕೆ ಸೇರಿಸಬೇಕು. ಬಡ್ತಿಗಾಗಿ ಪರೀಕ್ಷೆ ಇಲ್ಲದೆ ಸೇವಾ ಜೇಷ್ಠತೆ ಆಧರಿಸಿ ಶೇ. 75 ಮುಂಬಡ್ತಿ ನೀಡಲು ಕ್ರಮ ಜರುಗಿಸಬೇಕು. ಶಿಕ್ಷಕರ ಬೇಡಿಕೆ ಈಡೇರಿಕೆಗಾಗಿ ಸಮಗ್ರ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.

ತರಗತಿ ಬಹಿಷ್ಕರಿಸಲು ನಿರ್ಧಾರ: 1ರಿಂದ 7ನೇ ತರಗತಿಗೆ ನೇಮಕವಾದ ಶಿಕ್ಷಕರನ್ನು 1 ರಿಂದ 5ಕ್ಕೆ ತಳ್ಳಲ್ಪಟ್ಟಿದ್ದು, ಇದನ್ನು ಖಂಡಿಸಿ ಜು.1ರಿಂದ ರಾಜ್ಯಾದ್ಯಂತ 6-8 ತರಗತಿಗಳನ್ನು ಬಹಿಷ್ಕರಿಸಲು ನಿರ್ಣಯ ಕೈಗೊಂಡಿದ್ದಾರೆ. ಈ ಸಮಸ್ಯೆಯ ಗಂಭೀರತೆಯನ್ನು ಗಮನಿಸಿ 82 ಸಾವಿರ ಸೇವಾ ನಿರತ ಪ್ರಾಥಮಿಕ ಹಾಗೂ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರರ ಶಿಕ್ಷಕರ ಸಂಘದ ಅಧ್ಯಕ್ಷ ದಸ್ತಗಿರ್‌ಖಾನ್‌, ಉಪಾಧ್ಯಕ್ಷರಾದ ಎಸ್‌.ಎನ್‌. ಮಂಜೇಗೌಡ, ಕೆ.ಬಿ. ಆಶಾರಾಣಿ, ಚಲುವರಾಜು, ಕೆ. ಶಿವಲಿಂಗಯ್ಯ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next