Advertisement

ಪದವೀಧರ ಶಿಕ್ಷಕರಿಗೆ ಪರೀಕ್ಷೆಯಿಲ್ಲದೆ ಭಡ್ತಿ : ಭಡ್ತಿ ಪ್ರಮಾಣ ಶೇ. 40ಕ್ಕೆ ಏರಿಕೆ

12:23 AM Apr 29, 2022 | Team Udayavani |

ಉಡುಪಿ: ರಾಜ್ಯ ಸರಕಾರ ಹೊಸದಾಗಿ ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದೆ. ಜತೆಗೆ ಪದವೀಧರ ಶಿಕ್ಷಕರಿಗೆ ಭಡ್ತಿ ಭಾಗ್ಯವನ್ನೂ ಕರುಣಿಸಿದೆ.

Advertisement

ಹೊಸ ಶಿಕ್ಷಕರ ನೇಮಕದಿಂದ ಹಿಂಭಡ್ತಿ ಭೀತಿಯಲ್ಲಿದ್ದ ಶಿಕ್ಷಕರ ಸಮಸ್ಯೆಯ ಕುರಿತು “ಉದಯವಾಣಿ’ ಮಾ. 31ರಂದು “ಎನ್‌ಇಟಿ ಜಾರಿಯಿಂದ ಸೇವಾನಿರತ ಶಿಕ್ಷಕರಿಗೆ ಹಿಂಭಡ್ತಿ ಆತಂಕ’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರದ ಹಂತದಲ್ಲಿಯೂ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದವು. ಈಗ ಸರಕಾರ ಪರೀಕ್ಷೆ ಇಲ್ಲದೇ ಪದವೀಧರ ಶಿಕ್ಷಕರಿಗೆ ಭಡ್ತಿ ನೀಡಲು ನಿರ್ಧರಿಸಿ ಅದರ ಕರಡನ್ನು ಸಿದ್ಧಪಡಿಸಿದೆ.

ಭಡ್ತಿ ಪ್ರಮಾಣ ಹೆಚ್ಚಳ :

ಸರಕಾರಿ ಶಾಲೆಯ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶೇ. 25 ರಿಂದ ಶೇ. 33ರಷ್ಟು ಪ್ರಮಾಣದಲ್ಲಿ ಪರೀಕ್ಷೆ ಮೂಲಕ ಮುಂಭಡ್ತಿ ನೀಡುವ ಬದಲು ಶೇ. 40ರಷ್ಟು ಶಿಕ್ಷಕರನ್ನು ಪರೀಕ್ಷೆ ಇಲ್ಲದೇ ಮುಂಭಡ್ತಿ ನೀಡಲು ಕ್ರಮ ಆಗುತ್ತಿದೆ. ಇದಕ್ಕೆ ಸಂಬಂಧಿಸಿದ ಕರಡು ನಿಯಮಗಳು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಇಲಾಖೆಯಿಂದ ಅನುಮೋದನೆಗೊಂಡಿವೆ. ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡು ಸಚಿವ ಸಂಪುಟದ ಅನುಮೋದನೆ ಅನಂತರ ಕರಡು ನಿಯಮ ಪ್ರಕಟವಾಗಿ ಅದಕ್ಕೆ ಆಕ್ಷೇಪಣೆಗಳನ್ನು ಕರೆಯಲಾಗುತ್ತದೆ. ಆಕ್ಷೇಪಣೆಗಳ ಆಧಾರದಲ್ಲಿ ಅಂತಿಮ ವೃಂದ ಮತ್ತು ನೇಮಕಾತಿ ನಿಯಮಗಳು ಪ್ರಕಟಗೊಳ್ಳಲಿವೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಗಣಿತ, ವಿಜ್ಞಾನ, ಜೀವ ವಿಜ್ಞಾನ, ಸಮಾಜ ಮೊದಲಾದ ವಿಷಯಕ್ಕೆ ಸಂಬಂಧಿಸಿದ ವೃಂದಗಳು ಇರು ವುದರಿಂದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಕೂಡ ವಿಷಯವಾರು ಮುಂಭಡ್ತಿ ಪಡೆಯಲು ಸ್ಪಷ್ಟತೆಯನ್ನು ಕರಡು ಪ್ರತಿಯಲ್ಲಿ ಆಡಳಿತ ಇಲಾಖೆಯಿಂದ ಕೋರಲಾಗಿದೆ.

ಎ. 28ರಿಂದ 30ರ ವರೆಗೆ ಭಡ್ತಿ ಪ್ರಕ್ರಿಯೆ ನಡೆಯಲಿದೆ. 5,000ಕ್ಕೂ ಹೆಚ್ಚು ಶಿಕ್ಷಕರು ಭಡ್ತಿ ಪಡೆಯುವ ಸಾಧ್ಯತೆಯಿದೆ. ಪರೀಕ್ಷೆ ಇಲ್ಲದೇ ಪದವೀಧರ ಶಿಕ್ಷಕರಿಗೂ ಭಡ್ತಿ ಸಿಗಲಿರುವುದರಿಂದ ಅಂತಿಮ ನಿಯಮ ಸಿದ್ಧವಾದ ಅನಂತರವಷ್ಟೇ ಆ ಪ್ರಕ್ರಿಯೆ ಆರಂಭವಾಗಲಿದೆ. ಪದವೀಧರ ಶಿಕ್ಷಕ ರಾಗಿದ್ದು(ಪದವಿಯ ಅನಂತರ ಬಿ.ಇಡಿ. ಮುಗಿಸಿರುವ) ಪ್ರಾಥಮಿಕ ಶಾಲೆಗೆ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಇದರಿಂದ ಅನುಕೂಲವಾಗಲಿದೆ.

Advertisement

ಈಗಾಗಲೇ 1ರಿಂದ 6ನೇ ತರಗತಿ ವರೆಗೆ  ಬೋಧಿಸುತ್ತಿರುವ ಶಿಕ್ಷಕರಿಗೆ 8ನೇ ತರಗತಿ  ವರೆಗೂ ಬೋಧಿಸಲು ಅವಕಾಶ ನೀಡಲಾಗು ತ್ತದೆ. ವಿಷಯವಾರು ಶಿಕ್ಷಕರ ಲಭ್ಯತೆ ಆಧಾರ ದಲ್ಲಿ ಭಡ್ತಿ ಪ್ರಕ್ರಿಯೆ ನಡೆಯಲಿದೆ.

ಪದವೀಧರ ಶಿಕ್ಷಕರಿಗೆ ಪರೀಕ್ಷೆ ಇಲ್ಲದೇ ಮುಂಭಡ್ತಿ ನೀಡುವ ಬಗ್ಗೆ ಅನೇಕ ವರ್ಷದಿಂದ ಸಂಘದಿಂದ ಹೋರಾಟ ಮಾಡುತ್ತಿದ್ದೆವು. ಸರಕಾರ ಈಗ ಪ್ರಕ್ರಿಯೆ ಆರಂಭಿಸಿದೆ. ಇದರ ಜತೆಗೆ ಶಿಕ್ಷಕರ ಸೇವಾ ಜೇಷ್ಠತೆಯನ್ನು ಪರಿಗಣಿಸಲು ಪ್ರತ್ಯೇಕ ಜೇಷ್ಠತ ವ್ಯವಸ್ಥೆ ಹಾಗೂ ಆರ್ಥಿಕ ಸೌಲಭ್ಯವನ್ನು ದೊರಕಿಸಿಕೊಡಲು ನಿರಂತರ ಹೋರಾಟ ಮಾಡಲಿದ್ದೇವೆ.ಶಂಭುಲಿಂಗನಗೌಡ ಪಾಟೀಲ (ಅಧ್ಯಕ್ಷ ), ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next