Advertisement
ಚಿಕ್ಕಬಳ್ಳಾಪುರ: ಕೋವಿಡ್ 19 ಸಂಕಷ್ಟದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ವರ್ಷದ ಶೈಕ್ಷಣಿಕ ವರ್ಷವನ್ನು ಯಾವಾಗನಿಂದ ಆರಂಭಿಸಬೇಕೆಂಬ ಚಿಂತನೆಯಲ್ಲಿರುವಾಗಲೇ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾಡಪಲ್ಲಿಯಲ್ಲಿ ಪದವೀಧರರೊಬ್ಬರು ತನ್ನೂರಿನ ಸರ್ಕಾರಿ ಶಾಲಾ ಮಕ್ಕಳು ಬೇಸಿಕ್ಸ್ ಮರೆಯುತ್ತಿದ್ದಾರೆಂದು ಹೇಳಿ ಮಕ್ಕಳಿಗೆ ಪಾಠ ಹೇಳಿಕೊಡಲು ಶುರು ಮಾಡಿದ್ದಾರೆ.
Related Articles
Advertisement
ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೀಗಾಗಿ ಗ್ರಾಮದ ಬಿ.ಎ. ಬಿ.ಎಡ್ ಮುಗಿಸಿರುವ ಜೊತೆಗೆ ಐದು ವರ್ಷಗಳ ಹಿಂದೆ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ನರಸಿಂಹಮೂರ್ತಿ ಈಗ ತಮ್ಮನೂರು ಶಾಲಾ ಮಕ್ಕಳಿಗೆ ಮೇಷ್ಟ್ರ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿನವೀಡಿ ತನ್ನ ಕೆಲಸ, ಕಾರ್ಯಗಳಲ್ಲಿ ತೊಡಗಿಸಿ ಸಂಜೆ 2 ರಿಂ 3 ಗಂಟೆಗಳ ಕಾಲ ಗ್ರಾಮದ ವಿದ್ಯಾರ್ಥಿಗಳನ್ನು ಶಾಲೆಯಲ್ಲಿಯೇ ಸೇರಿಸಿ ಪಾಠ, ಪ್ರವಚನಗಳನ್ನು ಮಾಡುತ್ತಿದ್ದಾರೆ. ಮತ್ತು ಹೀಗೆ ಮಾಡುವ ಸಂದರ್ಭದಲ್ಲಿ ಮಕ್ಕಳೆಲ್ಲರೂ ಮಾಸ್ಕ್ ಧರಿಸಿ ಸೂಕ್ತ ಸಾಮಾಜಿಕ ಅಂತರವನ್ನು ಪಾಲಿಸುವುದನ್ನು ಮರೆತಿಲ್ಲ.
ನರಸಿಂಹಮೂರ್ತಿ ಅವರ ಈ ಕಾರ್ಯಕ್ಕೆ ಗ್ರಾಮದ ಪೋಷಕರು ಸಂತಸ ಪಡುತ್ತಿದ್ದಾರೆ. ಗ್ರಾಮದಲ್ಲಿ ಅಜ್ಜಿ ಮನೆಗೆ ಬಂದಿರುವ ಬೇರೆ ಊರಿನ ಮೊಮ್ಮಕ್ಕಳು, ಹಿರಿಯ, ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ತರಗತಿಗಳ ವಿದ್ಯಾರ್ಥಿಗಳು ಕಲಿಕೆಗೆ ಉತ್ಸುಕರಾಗಿದ್ದಾರೆ.
ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಬೇಕಾಗಿದ್ದ ಕೆಲಸವನ್ನು ವ್ಯಕ್ತಿಯೊಬ್ಬರು ಸ್ವಯಂ ಪ್ರೇರಿತವಾಗಿ ಬಂದು ಮಕ್ಕಳಿಗೆ ಪಾಠ ಮಾಡುತ್ತಿರುವುದಕ್ಕೆ ಅವರಿಗೆ ಅಭಿನಂದನೆಗಳು. ಬಾಗೇಪಲ್ಲಿಯಲ್ಲಿಯತಂಹ ಗಡಿ ತಾಲೂಕಿನಲ್ಲಿ ಮಧ್ಯಮ ವರ್ಗದ ಮಕ್ಕಳಿಗೆ ಕಲಿಕೆ ನಿರಂತರವಾಗಿ ಇರಲಿ ಎನ್ನುವ ಆಶಯದಿಂದ ನರಸಿಂಹಮೂರ್ತಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.– ಎಸ್.ಜಿ.ನಾಗೇಶ್, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ. ಮಕ್ಕಳಿಗೆ ಗೆಳೆಯರಿಂದ ಕಲಿಕೋಪಕರಣ
ನರಸಿಂಹಮೂರ್ತಿ, ಗ್ರಾಮದ ಕೆಲ ಗೆಳೆಯರ ಮನವೊಲಿಸಿ ಸದ್ಯಕ್ಕೆ ಕಲಿಯುತ್ತಿರುವ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ ಗಳು, ಪೆನ್ಸಿಲ್ ಗಳಿಗೆ, ಜಾಮಿಟ್ರಿ ಪೆಟ್ಟಿಗೆಗಳ ನೆರವು ನೀಡಲಾಗಿದೆ. ಸಂಜೆ ಶಾಲೆಗೆ ಬರುವ ಮಕ್ಕಳ ಕಲಿಕೆ ಅನುಕೂಲವಾಗಲು ಅಭ್ಯಾಸ ಪುಸ್ತಕಗಳು, ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿದ ಸಲಕರಣೆಗಳನ್ನು ಹಾಗೂ ಮಕ್ಕಳು ನೆಲದಲ್ಲಿ ಕೂತು ಪಾಠ ಕೇಳುತ್ತಿರುವುದರಿಂದ ಇವರಿಗೆ ಪೀಠೋಪಕರಣಗಳು, ಆಟಿಕೆಗಳನ್ನು ದಾನಿಗಳಿಂದ ನಿರೀಕ್ಷಿಸಿದ್ದಾರೆ. ಶಾಲೆಯ ಗೋಡೆಗಳಿಗೆ ಹೊಸ ಹಾಗೂ ಆಕರ್ಷಕವಾಗಿ ವರ್ಲಿ ಕಲೆ ಬಿಡಿಸಲು ಚಿಂತಿಸಿದ್ದಾರೆ. ಇಲ್ಲಿನ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಓದಬೇಕೆಂಬ ಆಸೆ ಇದ್ದರೂ ಸವಾಲುಗಳೇ ಹೆಚ್ಚು. ಇಲ್ಲಿಗೆ ಖಾಯಂ ಶಿಕ್ಷಕರ ನಿಯೋಜನೆ ಮಾಡಬೇಕಿದೆ. ಶಾಲೆ ಆರಂಭ ತಡವಾಗಿದೆ. ಮಕ್ಕಳು ಬೇಸಿಕ್ಸ್ ಮರೆಯಬಾರದೆಂದು ಸಂಜೆ ವೇಳೆ ತರಗತಿ ನಡೆಸುತ್ತಿದ್ದೇನೆ. ಮಕ್ಕಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
– ಮಾಡಪಲ್ಲಿ ನರಸಿಂಹಮೂರ್ತಿ, ಪದವೀಧರ.