Advertisement

ನೆಟ್‌ ಒಳಗೆ ಪದವಿ ಅಭ್ಯಾಸ

09:38 PM Feb 01, 2020 | Lakshmi GovindaRaj |

ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕನಸಿನ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಪದವಿ ಹಂತದ ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮವನ್ನು ಘೋಷಿಸಿದೆ. ಸಾಮಾನ್ಯ ಪದವಿ ಕೋರ್ಸ್‌ಗಳ ಮಾದರಿಯಲ್ಲೇ ಪೂರ್ಣ ಪ್ರಮಾಣದ ಪದವಿ ಆನ್‌ಲೈನ್‌ ಕೋರ್ಸ್‌ ಇದಾಗಿದೆ. ದೇಶದ ಪ್ರತಿಷ್ಠಿತ ಅಥವಾ ಅಗ್ರ 100 ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳು ಅತಿ ಸುಲಭವಾಗಿ ಆನ್‌ಲೈನ್‌ ಪದವಿ ಕೋರ್ಸ್‌ ಪಡೆಯಬಹುದಾಗಿದೆ.

Advertisement

ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕಾಲೇಜುಗಳಿಗೆ ಹೋಗಿ ಪದವಿ ಶಿಕ್ಷಣ ಪಡೆಯಲು ಶಕ್ತರಿಲ್ಲದ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕನಸನ್ನು ಸಾಕಾರ ಮಾಡಲು ಆನ್‌ಲೈನ್‌ ಪದವಿ ಕಾರ್ಯಕ್ರಮದ ಘೋಷಣೆ ಮಾಡಲಾಗಿದೆ.

ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉತ್ಕೃಷ್ಕ ಶಿಕ್ಷಣ ನೀಡುವ ಉದ್ದೇಶ ಮತ್ತು ಉನ್ನತ ಶಿಕ್ಷಣವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೂರ್ಣ ಪ್ರಮಾಣದ ಆನ್‌ಲೈನ್‌ ಪದವಿ ಕಾರ್ಯಕ್ರಮ ಆರಂಭಿಸುವ ಯೋಜನೆ ಇದಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಶ್ರೇಯಾಂಕ ನೀಡುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಬರುವ ನ್ಯಾಷನಲ್‌ ಇನ್‌ಸ್ಟಿಟ್ಯೂಶನಲ್‌ ರ್‍ಯಾಂಕಿಂಗ್‌ ಫ್ರೆಮ್‌ವರ್ಕ್‌(ಎನ್‌ಐಆರ್‌ಎಫ್) ನಿಂದ ಶ್ರೇಯಾಂಕ ಪಡೆದ ಶ್ರೇಷ್ಠ 100 ಶಿಕ್ಷಣ ಸಂಸ್ಥೆಗಳ ಮೂಲಕವೇ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಬ್ರಿಡ್ಜ್ ಕೋರ್ಸ್‌: ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ದಾದಿಯರು, ಆರೈಕೆದಾರರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಕೌಶಲ್ಯವೃದ್ಧಿ ಮತ್ತು ಸಮಾನತೆ ತರುವ ಸದುದ್ದೇಶದಿಂದ ಹೊಸ ಬ್ರಿಡ್ಜ್ ಕೋರ್ಸ್‌ ಒಂದನ್ನು ಆರಂಭಿಸಲಾಗುತ್ತದೆ. ಬ್ರಿಡ್ಜ್ ಕೋರ್ಸ್‌ ಹೇಗಿರಬೇಕು ಮತ್ತು ಅದರ ತರಬೇತಿ ಕುರಿತಾಗಿ ಕೇಂದ್ರ ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವಾಲಯವು ಉದ್ಯಮ ಶೀಲರು ಹಾಗೂ ವೃತ್ತಿಪರ ಸಂಸ್ಥೆಗಳ ಸಹಕಾರದೊಂದಿಗೆ ವಿಶೇಷ ಬ್ರಿಡ್ಜ್ ಕೋರ್ಸ್‌ನ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದೆ.

ಶೀಘ್ರದಲ್ಲಿ ಹೊಸ ಶಿಕ್ಷಣ ನೀತಿ: ಒಟ್ಟಾರೆಯಾಗಿ ಶಿಕ್ಷಣ ಕ್ಷೇತ್ರಕ್ಕೆ 2020-21ನೇ ಸಾಲಿನಲ್ಲಿ 99,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದರ ಜತೆಗೆ ಹೊಸ ಶಿಕ್ಷಣ ನೀತಿಯನ್ನು ಅತೀ ಶೀಘ್ರದಲ್ಲಿ ಘೋಷಣೆ ಮಾಡುವ ಭರವಸೆಯನ್ನು ನೀಡಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಜತೆ ಜತೆಗೆ ಕೌಶಲ್ಯಾಭಿವೃದ್ಧಿಗಾಗಿ 3 ಸಾವಿರ ಕೋಟಿ ರೂ,ಗಳನ್ನು ಮೀಸಲಿಟ್ಟಿದೆ. ಭಾರತವು ಉನ್ನತ ಶಿಕ್ಷಣದ ಆದ್ಯತಾ ತಾಣವಾಗಬೇಕು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಓದು(ಸ್ಟಡಿ ಇನ್‌ ಇಂಡಿಯಾ) ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿ ವೇತನ ಪಡೆದ, ಭಾರತದಲ್ಲಿ ಉನ್ನತ ವ್ಯಾಸಂಗ ಮಾಡುವ ಏಷ್ಯಾ ಮತ್ತು ಆಫ್ರಿಕ ದೇಶದ ವಿದ್ಯಾರ್ಥಿಗಳಿಗೆ ಐಎನ್‌ಡಿ-ಎಸ್‌ಎಟಿ ಪರೀಕ್ಷೆ ನಡೆಸಲು ಪ್ರಸ್ತಾಪಿಸಲಾಗಿದೆ.

Advertisement

ಹೊಸ ಶಿಕ್ಷಣ ನೀತಿಗೆ ಸುಮಾರು 2 ಲಕ್ಷ ಸಲಹೆಗಳನ್ನು ಪಡೆದಿದ್ದೇವೆ. ಈ ಸಂಬಂಧ ರಾಜ್ಯಗಳ ಶಿಕ್ಷಣ ಸಚಿವರು, ಸಂಸದರು ಹಾಗೂ ಶಿಕ್ಷಣ ಪಾಲುದಾರರೊಂದಿಗೆ ಸಂವಾದವನ್ನು ನಡೆಸಲಾಗಿದೆ. ಅತೀ ಶೀಘ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಘೋಷಿಸಲಿದ್ದೇವೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಬಾಹ್ಯವಾಣಿಜ್ಯ ಸಾಲ ಹಾಗೂ ನೇರ ವಿದೇಶಿ ಬಂಡವಾಳಕ್ಕೆ ಉತ್ತೇಜನ ನೀಡಲಾಗುತ್ತಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಏಜೆನ್ಸಿಯು ಸೌಲಭ್ಯ ಆಧಾರಿತ ಕೌಶಲ್ಯಾಭಿವೃದ್ಧಿಗೆ ಇನ್ನಷ್ಟು ಹೆಚ್ಚಿನ ಒತ್ತು ನೀಡುವ ಮೂಲಕ ಕೌಶಲ್ಯಾಭಿವೃದ್ಧಿಯಲ್ಲಿನ ಅವಕಾಶಗಳನ್ನು ಹೆಚ್ಚಿಸಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಅಪ್ರಂಟಿಶಿಪ್‌ ಡಿಪ್ಲೊಮಾ: ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿರುವ ವಿದ್ಯಾರ್ಥಿಗಳ ಮಾದರಿಯಲ್ಲಿ ಸಾಮಾನ್ಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉದ್ಯೋಗಾವಕಾಶ ಕೌಶಲ್ಯವನ್ನು ಸುಧಾರಿಸುವ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 2021ರ ಮಾರ್ಚ್‌ ವೇಳೆಗೆ ದೇಶದ 150 ಉನ್ನತ ಶಿಕ್ಷಣ ಸಂಸ್ಥೆಗಳು ಅಪ್ರಂಟಿಶಿಪ್‌, ಸಂಯೋಜಿತ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಿವೆ.

ರಾಷ್ಟ್ರೀಯ ನೇಮಕಾತಿ ಏಜೆನ್ಸಿ: ಸರ್ಕಾರದ ಪತ್ರಾಂಕಿತೇತರ(ನಾನ್‌-ಗೆಜೆಟೆಡ್‌) ಹುದ್ದೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಸದ್ಯ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಬೇರೆ ಬೇರೆ ಏಜೆನ್ಸಿಗಳು ನೀಡುವ ಪರೀಕ್ಷೆಗಳನ್ನು ವಿವಿಧ ಸಂದರ್ಭದಲ್ಲಿ ಎದುರಿ ಸಬೇಕಿತ್ತು. ಇದರಿಂದ ಶ್ರಮ, ಸಮಯ ಹಾಗೂ ಯುವಶಕ್ತಿ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ಆರಂಭಿಸಲು ಪ್ರಸ್ತಾಪಿಸ ಲಾಗಿದೆ. ಇದೊಂದು ಸ್ವತಂತ್ರ, ವೃತ್ತಿಪರ ಹಾಗೂ ವಿಷಯ ತಜ್ಞರ ಸಂಸ್ಥೆಯಾ ಗಲಿದೆ. ನಾನ್‌-ಗೆಜೆಟೆಡ್‌ ಹುದ್ದೆಗಳಿಗೆ ಕಂಪ್ಯೂಟರ್‌ ಆಧಾರಿತ ಆನ್‌ಲೈನ್‌ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲಿದೆ. ಎಲ್ಲ ಜಿಲ್ಲಾ ಕೇಂದ್ರ, ಅದರಲ್ಲಿಯೂ ಮಹತ್ವಕಾಂಕ್ಷೆಯ ಜಿಲ್ಲೆಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿವರಿಸಿದರು.

ಎಂಜಿನೀಯರಿಂಗ್‌ ಪದವೀಧರರಿಗೆ ಇಂಟರ್ನ್ಶಿಪ್‌: ಹೊಸದಾಗಿ ಎಂಜಿನಿಯರಿಂಗ್‌ ಪದವಿ ಪಡೆದ ಪದವೀಧರರಿಗೆ ದೇಶದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷದ ಇಂಟರ್ನ್ಶಿಪ್‌ ಕಾರ್ಯಕ್ರಮವನ್ನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಇದರಿಂದ ಹೊಸ ಎಂಜಿನಿಯರ್‌ಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ ಎಂದು ಬಜೆಟ್‌ನಲ್ಲಿ ಉಲ್ಲೇಖೀಸಿದ್ದಾರೆ.

ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ 18,600 ಕೋಟಿ ರೂ. ಮೀಸಲಿಡಲಾಗಿದೆ. 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಪರಿಸರ ಮಾಲಿನ್ಯ ತಡೆಯಲು 4400 ಕೋಟಿ ರೂ. ರೂ. ಮೀಸಲಿಟ್ಟಿದ್ದು 1 ಲಕ್ಷ ಗ್ರಾಪಂಗಳಿಗೆ ಇಂಟರ್‌ನೆಟ್‌ ಸಂಪರ್ಕ, ದೇಶದ ಬರಪೀಡಿತ 100 ಜಿಲ್ಲೆಗಳಿಗೆ ಜಲ ಮರುಪೂರಣ ಯೋಜನೆ ಅತ್ಯುತ್ತಮ ನಿರ್ಧಾರ.
-ಆರ್‌.ಅಶೋಕ್‌, ಕಂದಾಯ ಸಚಿವ

ಅದೇಕೆ ಬಿಜೆಪಿಯ ಆದ್ಯತೆಗಳಲ್ಲಿ ದೆಹಲಿಗೆ ಸ್ಥಾನ ಇರುವುದೇ ಇಲ್ಲ? ಪರಿಸ್ಥಿತಿ ಹೀಗಿರುವಾಗ ದೆಹಲಿಗರೇಕೆ ಬಿಜೆಪಿಗೆ ಓಟ್‌ ಹಾಕಬೇಕು? ದೆಹಲಿ ಜನರಿಗೆ ಬಜೆಟ್‌ನಿಂದ ತುಂಬಾ ನಿರೀಕ್ಷೆಗಳಿದ್ದವು. ಆದರೆ ಮತ್ತೂಮ್ಮೆ ಮಲತಾಯಿ ಧೋರಣೆ ತೋರಿಸಲಾಗಿದೆ.
-ಅರವಿಂದ್‌ ಕೇಜ್ರಿವಾಲ್‌, ದೆಹಲಿ ಸಿಎಂ

ಇದು ಸುದೀರ್ಘ‌ ಬಜೆಟ್‌ ಭಾಷಣವೂ ಹೌದು, ಅತ್ಯಂತ ಕಳಪೆ ಬಜೆಟ್‌ ಕೂಡ ಹೌದು. ಅಚ್ಛೇ ದಿನ, ನವ ಭಾರತವನ್ನು ಕೈಬಿಟ್ಟ ಕೇಂದ್ರ ಸರ್ಕಾರ, ಈಗ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುವ ಕನಸನ್ನೂ ಕೈಬಿಟ್ಟಂತೆ ಕಾಣಿಸುತ್ತಿದೆ.
-ಅಹ್ಮದ್‌ ಪಟೇಲ್‌, ಕಾಂಗ್ರೆಸ್‌ ನಾಯಕ

ಈ ಬಜೆಟ್‌ಗೆ 10ರಲ್ಲಿ ಎಷ್ಟು ಅಂಕ ಕೊಡಬೇಕು ಎಂದು ಕೇಳಲಾಗುತ್ತಿದೆ. 10ರಲ್ಲಿ 1 ಮತ್ತು 0 ಸಂಖ್ಯೆಗಳಿವೆ. ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ.
-ಪಿ.ಚಿದಂಬರಂ, ಮಾಜಿ ಹಣಕಾಸು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next