Advertisement

ಪದವಿ ಕಾಲೇಜುಗಳಲ್ಲಿ ಬಿಕಾಂ, ಬಿಸಿಎಗೆ ಬೇಡಿಕೆ

09:10 PM Jun 03, 2019 | Sriram |

ಉಡುಪಿ: ಪಿಯುಸಿ, ಸಿಇಟಿ ಪರೀಕ್ಷೆ ಫ‌ಲಿತಾಂಶ ಬಂದು ಪದವಿ ಕಾಲೇಜುಗಳಿಗೆ ಪ್ರವೇಶ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಲೇಜುಗಳಲ್ಲಿ ಬಿಕಾಂ, ಬಿಬಿಎಂ, ಬಿಸಿಎ ಪದವಿಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ಜೂ. 20ಕ್ಕೆ ಕಾಲೇಜುಗಳ ತರಗತಿಗಳು ಆರಂಭಗೊಳ್ಳುತ್ತವೆ. ಜೂ. 30ರ ವರೆಗೆ ಪ್ರವೇಶಾವಕಾಶವಿದೆ.


ಬಿಕಾಂ, ಬಿಬಿಎಂ, ಬಿಸಿಎಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಸಿಕ್ಕಿದೆ. ಬಹುತೇಕ ಎಲ್ಲ ಕಾಲೇಜುಗಳಲ್ಲಿ ಬಿಕಾಂ ಕೋರ್ಸ್‌ ಹೌಸ್‌ಫ‌ುಲ್‌ ಆಗಿದೆ. ಇಲ್ಲಿ ಶೇ.80 ಅಂಕಕ್ಕಿಂತ ಹೆಚ್ಚಿಗೆ ಪಡೆದವರಿಗೆ ಮಾತ್ರ ಪ್ರವೇಶ ಸಿಕ್ಕಿದೆ. ಬಿಎಸ್ಸಿ ಪದವಿಗೆ ಬೇಡಿಕೆ ಅಷ್ಟಕ್ಕಷ್ಟೆ ಇದೆ. ಸಿಇಟಿಯಲ್ಲಿ ಹೆಚ್ಚು ಅಂಕ ಗಳಿಸಲಾಗದ ವಿದ್ಯಾರ್ಥಿಗಳು ಬಿಎಸ್ಸಿಗೆ ಸೇರ್ಪಡೆಯಾಗಿರುವುದರಿಂದ ಮತ್ತು ನೀಟ್‌ ಪರೀಕ್ಷಾ ಫ‌ಲಿತಾಂಶ ಇನ್ನಷ್ಟೇ ಬರಬೇಕಾಗಿರುವುದರಿಂದ ಬಿಎಸ್ಸಿ ಉಪನ್ಯಾಸಕರು ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ. ದ್ವಿತೀಯ ಪಿಯುಸಿ ಮರು ಪರೀಕ್ಷಾ ಫ‌ಲಿತಾಂಶವೂ ಬರ ಬೇಕಾಗಿರುವುದರಿಂದ ಉಪನ್ಯಾಸಕರಲ್ಲಿ ನಿರೀಕ್ಷೆಗಳಿವೆ.
Advertisement

ಬಿಎ ಪದವಿ ಇತ್ತೀಚಿನ ಟ್ರೆಂಡ್‌ನೆ ಅನುಭವಿಸುತ್ತಿದೆ. 1960-70ರ ದಶಕಗಳಲ್ಲಿ ಬಿಎ ಪದವಿಯಲ್ಲಿ ಇಂಗ್ಲಿಷ್‌, ಕನ್ನಡ ಮೇಜರ್‌ ವಿಷಯ ತೆಗೆದುಕೊಳ್ಳುವುದೆಂದರೆ ಘನತೆ ಎಂದು ಪರಿಗಣಿಸಲಾಗುತ್ತಿತ್ತು. ಆ ಕಾಲದ ಉಪನ್ಯಾಸಕರು ತಮ್ಮ ವಿದ್ವತ್ತಿನಿಂದಲೇ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ತತ್ಸಮಾನವಾದ ಗೌರವ ಹೊಂದಿದ್ದರು. ಆಗ ಪ್ರಾಂಶುಪಾಲರಾಗಿ ನೇಮಕ ಗೊಳ್ಳುವವರಲ್ಲಿ ಹೆಚ್ಚಿನವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿರುತ್ತಿದ್ದರು. ಬಹುತೇಕ ಹೆಸರಾಂತ ಸಾಹಿತಿಗಳು ಕಾಲೇಜುಗಳ ಪ್ರಾಧ್ಯಾಪಕರು, ಪ್ರಾಂಶುಪಾಲ ರಾಗಿರುತ್ತಿದ್ದರು. ಈಗ ಶೇ.50 ಅಂಕ ಗಳಿಸಿದ ವಿದ್ಯಾರ್ಥಿಗಳಾದರೂ ಸಿಕ್ಕಿದರೆ ಸಾಕು ಎಂಬ ಸ್ಥಿತಿಯಲ್ಲಿ ಇಂಗ್ಲಿಷ್‌, ಕನ್ನಡದಂತಹ ಮೇಜರ್‌ ವಿಷಯಗಳಿವೆ. ವಾಸ್ತವದಲ್ಲಿ ಇಂಗ್ಲಿಷ್‌ ಕಾವ್ಯವನ್ನು ಜೀರ್ಣಿಸಿಕೊಳ್ಳಬೇಕಾದರೆ ಶೇ.75 ಅಂಕ ಗಳಿಸಿದ ಬುದ್ಧಿವಂತಿಕೆಯಾದರೂ ಬೇಕು.

ಕನ್ನಡ ಸಾಹಿತ್ಯದ್ದೂ ಇದೇ ಕಥೆ…
ಈ ಪರದಾಟಕ್ಕೆ ಕಾರಣವೆಂದರೆ ಕನಿಷ್ಠ 15 ವಿದ್ಯಾರ್ಥಿಗಳು ಸತತ ಮೂರು ವರ್ಷ ಇಲ್ಲದಿದ್ದರೆ ಆ ಉಪನ್ಯಾಸಕರನ್ನು (ಅನುದಾನಿತ) ಬೇರೆ ಕಾಲೇಜು ಗಳಿಗೆ ವರ್ಗಾಯಿಸಲಾಗುವುದೆಂಬ ಕಾನೂನು ಇದೆ. ಇವರೇನೂ ಆಡಳಿತ ಮಂಡಳಿ ನೇಮಿಸಿಕೊಂಡ ತಾತ್ಕಾಲಿಕ ಉಪನ್ಯಾಸಕರಲ್ಲ. ಯುಜಿಸಿ ಶ್ರೇಣಿ ವೇತನ ಪಡೆಯುವ “ಘನತೆ’ಯ ಪ್ರಾಧ್ಯಾಪಕರು. ಈ ಘನವೆತ್ತ ಪ್ರಾಧ್ಯಾಪಕರು ಬೇರೆಡೆ ವರ್ಗಾವಣೆಯಾಗುವುದೆಂಬ ಭಯ ದಲ್ಲಿ ಕೈಗೆ ಸಿಕ್ಕಿದ ವಿದ್ಯಾರ್ಥಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ “ದುಃಸ್ಥಿತಿ’ ಯಲ್ಲಿದ್ದಾರೆ. ಇಂತಹವರ ಗುರಿ ತಾವು ನಿವೃತ್ತಿಯಾಗುವವರೆಗೆ ಈ ಕೋರ್ಸ್‌ ಇದ್ದರೆ ಸಾಕಪ್ಪ ಎಂಬುದಕ್ಕೆ ಮಾತ್ರ ಸೀಮಿತ. ಬಹುತೇಕ ಅನುದಾನಿತ ಕಾಲೇಜುಗಳು ಬಿಎ ಪದವಿಯನ್ನು ನಿಃಶುಲ್ಕದಲ್ಲಿ ನೀಡುತ್ತೇವೆಂದರೂ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಹಾಗಂತ ಮನಃಶಾಸ್ತ್ರ, ಮಾಧ್ಯಮ ಇತ್ಯಾದಿ ಹೊಸ ಕಾಂಬಿನೇಶನ್‌ ಮಾಡೋಣವೆಂದರೆ ಈಗಿರುವ ಯುಜಿಸಿ ಶ್ರೇಣಿಯವರು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ಇಂತಹ ಕಡೆ ಹೊಸ ಕಾಂಬಿನೇಶನ್‌ ಕೋರ್ಸ್‌ ಆರಂಭಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ.

ಹೆಮ್ಮಕ್ಕಳಿಗೆ ಶುಲ್ಕ ವಾಪಸು
ಅನುದಾನಿತ ಕಾಲೇಜುಗಳಲ್ಲಿ ಬಿಕಾಂ, ಬಿಬಿಎಂ, ಬಿಸಿಎಗಳಂತಹ ಕೋರ್ಸ್‌ಗಳಿಗೆ 20ರಿಂದ 30,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಕಾಲೇಜುಗಳಲ್ಲಿ ಬಿಕಾಂ, ಬಿಸಿಎ, ಬಿಎಸ್ಸಿ, ಬಿಎ ಹೀಗೆ ಯಾವುದೇ ಪದವಿಗಳಿಗೆ ಸುಮಾರು 3,000 ರೂ. ಶುಲ್ಕವಿದೆ. ಇಷ್ಟು ಮಾತ್ರವಲ್ಲ ಹೆಮ್ಮಕ್ಕಳಿಗೆ ಇಷ್ಟೂ ಶುಲ್ಕ ವಾಪಸು ಸಿಗುತ್ತದೆ. ಇದಲ್ಲದೆ ವಿವಿಧ ಬಗೆಯ ವಿದ್ಯಾರ್ಥಿವೇತನ ಸಿಗುತ್ತದೆ.

-ಮಟಪಾಡಿ ಕುಮಾರಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next