Advertisement

ಪದವಿ ಕಾಲೇಜು ವಿದ್ಯಾರ್ಥಿನಿ ಈಗ ಪುರಸಭೆ ಸದಸ್ಯೆ

10:49 AM Jun 01, 2019 | Suhan S |

ಮಾಲೂರು: ಪುರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿದ್ಯಾಭ್ಯಾಸದ ದಿನಗಳಲ್ಲಿಯೇ 19ರ ಕಾಲೇಜು ಪೋರಿಯೊಬ್ಬಳು ರಾಜಕೀಯಕ್ಕೆ ಇಳಿದು ಅಚ್ಚರಿ ಮೂಡಿಸಿದ್ದಾಳೆ.

Advertisement

ಪಟ್ಟಣದ ವಾರ್ಡ್‌ ಸಂಖ್ಯೆ 27ರ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಜಯ ಸಾಧಿಸಿರುವ ಪಿ.ಸುಮಿತ್ರಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ. ಕಳೆದ ಅವಧಿಯಲ್ಲಿ ತನ್ನ ತಂದೆ ಪಚ್ಚಪ್ಪ ಇದೇ ವಾರ್ಡ್‌ ನಿಂದ ಜೆಡಿಎಸ್‌ ಸದಸ್ಯರಾಗಿದ್ದರು. ಈ ಬಾರಿ ಮೀಸಲಾತಿ ಬದಲಾವಣೆಯಿಂದ ತಂದೆಯ ಶಿಫಾ ರಸ್ಸಿನಿಂದ ಸಿಕ್ಕ ಅವಕಾಶ ಬಳಸಿಕೊಂಡ ಸುಮಿತ್ರಾ 393 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ವಕೀಲರಾಗುವ ಆಸೆ: ಈ ವೇಳೆಯಲ್ಲಿ ಉದಯವಾಣಿಯೊಂದಿಗೆ ಮಾತನಾಡಿದ ಪಿ.ಸುಮಿತ್ರಾ, ರಾಜಕಾರಣಕ್ಕೆ ಬರುವ ಬಗ್ಗೆ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಪದವಿಯ ನಂತರ ಕಾನೂನು ಪದವಿಯನ್ನು ಪಡೆದು ವಕೀಲಿ ವೃತ್ತಿಯನ್ನು ಆರಂಭಿಸುವ ಮಹತ್ವದ ಕನಸ್ಸು ಹೊಂದಿದ್ದೇನೆ. ಕಾಲೇಜಿನಿಂದ ಮನೆಗೆ ಬರುವ ವೇಳೆಗೆ ತಂದೆಯವರ ಮಾತಿಗೆ ಮರು ಮಾತನಾಡದೆ ಬಿಜೆಪಿ ಬಿ ಫಾರಂನೊಂದಿಗೆ ಚುನಾವಣೆಗೆ ಸ್ಪರ್ಧಿಸಿದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ತಂದೆಯವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳಿಂದ ಪ್ರಭಾವಿತರಾದ ಇಂದಿರಾ ನಗರದ ವಾಸಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಅವರ ಅಶೋತ್ತರಗಳಿಗೆ ಚ್ಯುತಿಯಾಗದಂತೆ ಅಭಿವೃದ್ಧಿ ಮಾಡುತ್ತೇನೆ. ಜನಸೇವೆಗೆ ಸಿಕ್ಕ ಅವಕಾಶ ಬಳಕೆ ಮಾಡಿಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭಾ ಸಾಮಾನ್ಯ ಸಭೆಗಳಲ್ಲಿ ಮಹಿಳಾ ಸದಸ್ಯರು ಮಾತನಾಡುವುದಿಲ್ಲ ಎಂಬ ಮಾತಿದೆ. ಈ ಬಗ್ಗೆ ಸುಮಿತ್ರಾ ಅಭಿಪ್ರಾಯ ಸಂಗ್ರಹಿಸಿದಾಗ, ಮುಂದಿನ ಸಭೆಗಳಲ್ಲಿ ಗಮನಿಸಿ ಸಭೆಗಳಲ್ಲಿ ಗಂಭೀರವಾಗಿ ಚರ್ಚಿಸಿ ನನ್ನ ಜನತೆಗೆ ಬೇಕಾಗಿರುವ ಸೌಲಭ್ಯ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಇದೇ ವೇಳೆಯಲ್ಲಿ ಮಾಜಿ ಸದಸ್ಯ ಪಚ್ಚಪ್ಪ ಮಾತನಾಡಿ, ಕ್ಷೇತ್ರದ ಜನರು ಮತ್ತು ಮುಖಂಡರ ಒತ್ತಾಯದ ಮೇರೆಗೆ ಕಿರಿಯ ಪುತ್ರಿ ಸುಮಿತ್ರಾ ಅವರನ್ನು ಕಣಕ್ಕೆ ಇಳಿಸಿದ್ದೆ. ಕಾಲೇಜು ವಿದ್ಯಾರ್ಥಿನಿಯಾದ್ರೂ ಜನರು ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು.

ಇದೇ ರೀತಿಯಲ್ಲಿ 2003 ಪುರಸಭಾ ಚುನಾವಣೆಯಲ್ಲಿ ವಾರ್ಡ್‌ 4ರಿಂದ ಕೋಮಲಾ ಎಂಬ ಟಿಸಿಎಚ್ ವಿದ್ಯಾರ್ಥಿನಿಯನ್ನು ಗೆಲ್ಲಿಸಿದ್ದು, ಐದು ವರ್ಷಗಳ ಅಡಳಿತದ ನಂತರ ಕೋಮಲಾ ಅವರ ಪ್ರಸ್ತುತ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next