Advertisement

ಕಟ್ಟೆಚ್ಚರ: ಜಿಲ್ಲಾಡಳಿತಕ್ಕೆ ಖಾದರ್‌ 

06:00 AM Jul 08, 2018 | Team Udayavani |

ಮಂಗಳೂರು: ದ.ಕ. ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರುವ ಸಾಧ್ಯತೆಯಿದೆ. ಮೂರು ದಿನ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಹಾಯಕ ಆಯುಕ್ತರು, ಮೀನುಗಾರಿಕೆ, ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನ್ನೆಚ್ಚರಿಕೆ ದೃಷ್ಟಿಯಿಂದ ಎನ್‌ಡಿಆರ್‌ಎಫ್‌ ತಂಡ ಮಂಗಳೂರಿಗೆ ಆಗಮಿಸುತ್ತಿದೆ. ಅಗ್ನಿಶಾಮಕ ಇಲಾಖೆ ದಿನದ 24 ಗಂಟೆಯೂ ಸನ್ನದ್ಧವಾಗಿರಬೇಕು. ಸ್ಥಳೀಯ ಮೀನುಗಾರರ ಬೋಟ್‌ಗಳ ಸಹಾಯವನ್ನೂ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ. ಆ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ನೀಡಲಾಗುವುದು. ಎರಡು ದಿನಗಳಲ್ಲಿ 12 ಸಹಿತ ಒಟ್ಟು 929 ಮನೆಗಳಿಗೆ ಹಾನಿಯಾಗಿದೆ. 803 ಪಕ್ಕಾ ಮನೆಗಳ ಪೈಕಿ 727 ಮನೆಗಳಿಗೆ ಪರಿಹಾರ ನೀಡಲಾಗಿದೆ. 118 ಕಚ್ಚಾ ಮನೆಗಳ ಪೈಕಿ 102 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಈ ವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದರು.

ಇಲ್ಲಿಯವರೆಗೆ 1,451 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 1,957.8 ಮಿ.ಮೀ. ಮಳೆಯಾಗಿದೆ. ಪ್ರಕೃತಿ ವಿಕೋಪ ಸಂಭವಿಸಿದ ಸಮಯದಲ್ಲಿ ಪರಿಹಾರ ನೀಡಲು ಸಮಸ್ಯೆಯಿದ್ದ ನಿಯಮ ಬದಲಾಗಿದ್ದು, ಶೇ. 45ರ ವರೆಗೆ ಮನೆ ಹಾನಿ ಸಂಭವಿಸಿದರೆ 42,795 ರೂ., ಶೇ. 68ರಷ್ಟು ಹಾನಿ ಸಂಭವಿಸಿದರೆ 64,000 ರೂ. ಮತ್ತು ಅದಕ್ಕೂ ಜಾಸ್ತಿ ಹಾನಿ ಸಂಭವಿಸಿದರೆ 95,000 ರೂ. ಪರಿಹಾರ ನೀಡಲಾಗುವುದು. ಪ್ರಾಣ ಹಾನಿ ಸಂಭವಿಸಿದರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

ಪರ್ಯಾಯ ವಸತಿ ವ್ಯವಸ್ಥೆ 
ಪುತ್ತೂರು ತಾಲೂಕು ಸಹಾಯಕ ಆಯುಕ್ತ ಕೃಷ್ಣಮೂರ್ತಿ  ಮಾತನಾಡಿ, ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಒಂದು ವೇಳೆ ಸಂಗಮವಾದರೆ ಸುಮಾರು 18 ಮನೆಗಳು ಸೇರಿದಂತೆ ಸುಮಾರು 2 ಎಕರೆ ಪ್ರದೇಶ ಮುಳುಗಡೆಯಾಗಲಿದೆ. ಈ ಸಮಯದಲ್ಲಿ ಉಪ್ಪಿನಂಗಡಿ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

Advertisement

ಪರಿಕರ ವಿತರಣೆ
ಸಿಆರ್‌ಎಫ್‌ ನಿಧಿಯ 22 ಲಕ್ಷ ರೂ. ಅನುದಾನದಿಂದ 8 ಬೋಟ್‌, 3 ಸ್ಕೂಬಾ ಡ್ರೈವಿಂಗ್‌ ಸೆಟ್‌, 4 ಪೆಟ್ರೋಲ್‌ ಡ್ರಿವಿನ್‌ ಚೈನ್‌, ಟ್ರೀ ಕಟ್ಟರ್‌ ಯಂತ್ರವನ್ನು ಸಚಿವ ಯು.ಟಿ. ಖಾದರ್‌ ಇದೇ ವೇಳೆ ಅಗ್ನಿಶಾಮಕ ಇಲಾಖೆಗೆ ವಿತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next