ಮಂಗಳೂರು: ಸ್ವಾರ್ಥ ತೊರೆದು ಭಕ್ತಿಯಿಂದ ಪ್ರಾರ್ಥಿಸಿದರೆ ದೇವನು ಸಂಪ್ರೀತನಾಗುತ್ತಾನೆ. ಇದರಿಂದ ನಮಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಶ್ರೀ ಕೇಶವಾನಂದ ಭಾರತಿ ಶ್ರೀಪಾದರು ಹೇಳಿದರು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವರ ಅನುಗ್ರಹ ಇಲ್ಲದಿದ್ದರೆ ನಾವು ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸುಸಿಗುವುದಿಲ್ಲ. ಯಾವುದೇ ವಿಜ್ಞಾನಿ,ಸಂಶೋಧಕನಿಗಿಂತಲೂ ಮಹತ್ತರವಾದ ಶಕ್ತಿ ಭಗವಂತನಿಗಿದೆ. ಭಗವಂತನನ್ನು ಸಂಪ್ರೀತಿಗೊಳಿಸಲು ಹಣ ಖರ್ಚು ಮಾಡಬೇಕು ಎಂದೇನಿಲ್ಲ. ಶುದ್ಧವಾದ ಮನಸ್ಸು ಮತ್ತು ಭಕ್ತಿ ಇದ್ದರೆ ಸಾಕು ಎಂದರು.
ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಪೊರೇಶನ್ ಬ್ಯಾಂಕ್ ಪ್ರಧಾನ ಕಚೇರಿ ಚೇರ್‌ಮನ್ ಪಿ.ವಿ. ಭಾರತಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕದ್ರಿಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕ್‌ನ ಮಹಾ ಪ್ರಬಂಧಕ ಜಗನ್ನಾಥ ಶೆಟ್ಟಿ, ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಕೆ.ಸಿ. ನಾಯ್ಕ, ಕಾಂಚನ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್ ಕಾಂಚನ್, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ನಿಕಟಪೂರ್ವ ಅಧ್ಯಕ್ಷ ಚಿತ್ತರಂಜನ್, ಬೋಳಾರ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ತಾರಾನಾಥ್ ಬೋಳಾರ, ಶ್ರೀ ಕ್ಷೇತ್ರ ಕದ್ರಿಯ ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ ಉಪಸ್ಥಿತರಿದ್ದರು.
ಸಮ್ಮಾನ
ಶ್ರೀ ಕ್ಷೇತ್ರ ಕದ್ರಿಯ ಅರ್ಚಕರಾದ ರಾಮಚಂದ್ರ ಭಟ್, ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಸಂಜೀವ ಮಡಿವಾಳ, ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ತಹಶೀಲ್ದಾರ ಮೋಹಿನಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರು ಕಾರ್ಯಕ್ರಮ ನಿರೂಪಿಸಿದರು.