ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಆಗಸ್ಟ್ ತಿಂಗಳಿಡೀ ಭಾರತ ಸ್ವತಂತ್ರ್ಯ ದಿನಾಚರಣೆ ಸಂಭ್ರಮೋತ್ಸವ ಆಚರಿಸಲು ನಿರ್ಧರಿಸಿದ್ದು, ಗ್ರಂಥಾಲಯಗಳನ್ನು ಜ್ಞಾನ ಕೇಂದ್ರವನ್ನಾಗಿಸುವುದರ ಜತೆಗೆ ಶಾಲಾ ಮಕ್ಕಳಿಗೆ ಓದುವ ಬೆಳಕು ಕಾರ್ಯಕ್ರಮದಡಿ ವಿವಿಧ ಚಟುವಟಿಕೆಗಳನ್ನು ನೀಡಲು ಸುತ್ತೋಲೆ ಹೊರಡಿಸಿದೆ.
ಗ್ರಂಥಾಲಯ ಮೇಲ್ವಿಚಾರಕರು ತ್ರಿವರ್ಣಧ್ವಜ ಮತ್ತು ಬ್ಯಾಡ್ಜ್ ತಯಾರಿಸುವಂತೆ ಗ್ರಂಥಾಲಯಕ್ಕೆ ಬರುವ ಮಕ್ಕಳಿಗೆ ಉತ್ತೇಜನ ನೀಡಬೇಕು. ಕಾಗದ, ಬಣ್ಣಗಳೊಂದಿಗೆ ಗ್ರಂಥಾಲಯದಲ್ಲಿ ಕಾಲ ಕಳೆಯುವಂತೆ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟು, ತ್ರಿವರ್ಣಧ್ವಜ ಹಾಗೂ ಬ್ಯಾಡ್ಜ್ನ್ನು ಬಟ್ಟೆಪಿನ್‌ನೊಂದಿಗೆ ತಯಾರಿಸಬೇಕು. ಅದನ್ನು ಆ.15 ರಂದು ಅವರ ಶಾಲೆಯಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧರಿಸುವಂತೆ ತಿಳಿಸಬೇಕು.
ಸಂವಿಧಾನದ ಮೂಲ ಆಶಯಗಳ ಬಗ್ಗೆ ಚಿಕ್ಕವಯಸ್ಸಿನಲ್ಲೇ ಅರಿವು ಮೂಡಿಸಲು ಸಂವಿಧಾನದ ಪೀಠಿಕೆಯನ್ನು ಓದಿಸಬೇಕು. ಸಂವಿಧಾನದ ಪೀಠಿಕೆಯ ಪ್ರತಿಯನ್ನು ಮಕ್ಕಳ ಕೈಗೆ ಕೊಟ್ಟು ಅವರಿಂದಲೆ ಬರೆಯಿಸಬೇಕು. ವಿವಿಧ ಬಣ್ಣಗಳಿಂದ ಸುಂದರವಾದ ಚೌಕಟ್ಟು ರೂಪಿಸಬೇಕು. ಸಂವಿಧಾನ ಪೀಠಿಕೆಯ ಕಲಾಕೃತಿಗಳನ್ನು ಮಕ್ಕಳು ಮನೆಯಲ್ಲೇ ತಯಾರಿಸಿ, ಗ್ರಂಥಾಲಯಗಳಲ್ಲಿ ಪ್ರದರ್ಶಿಸಬೇಕು.
ದೇಶಭಕ್ತಿಗೀತೆಗಳನ್ನು ಹೇಳಿಕೊಡಬೇಕು. ಇದಕ್ಕಾಗಿ ಮಕ್ಕಳನ್ನು ಒಟ್ಟುಗೂಡಿಸಬೇಕು. ಗುಂಪು ಚಟುವಟಿಕೆಯ ಮೂಲಕ ವಿಶ್ವಾಸ ಹಾಗೂ ದೇಶಭಕ್ತಿ ಹೆಚ್ಚಿಸಬೇಕು. ಕಲಿತ ಹಾಡನ್ನು ಹಾಡಿಸಿ ವೀಡಿಯೋ ಮಾಡಬೇಕು. ಅದನ್ನೇ ಗ್ರಂಥಾಲಯ ಅಥವಾ ಶಾಲೆಯಲ್ಲಿ ಆಚರಿಸುವ ಸ್ವತಂತ್ರ ದಿನಾಚರಣೆಯಲ್ಲೂ ಹಾಡಿಸಬೇಕು.
ಸ್ವಾತಂತ್ರ್ಯ ಚಳವಳಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಭಾರತದ ಸ್ವಾತಂತ್ರ್ಯಕ್ಕೆ ಕರ್ನಾಟಕದ ಹೋರಾಟಗಾರರ ಕೊಡುಗೆಗಳ ಬಗ್ಗೆ ಸ್ಥಳೀಯರ ಹಿರಿಯರು, ಶಾಲಾ ಶಿಕ್ಷಕರ ಮೂಲಕ ತಿಳಿಸಿಕೊಡಬೇಕು. ಹೋರಾಟಗಾರರ ವ್ಯಕ್ತಿತ್ವ ಪರಿಚಯಿಸಿ ಉತ್ತಮ ನಾಗರಿಕರಾಗಿ ದೇಶಕ್ಕೆ ಕೊಡುಗೆ ಕೊಡುವಂತೆ ಪ್ರೇರೇಪಿಸಬೇಕು. ದೇಶಭಕ್ತಿ, ಸಾಮಾಜಿಕ ಕಳಕಳಿ, ದೇಶಭಕ್ತರ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.