Advertisement

150 ನಗರ ಸಾರಿಗೆ ಬಸ್‌ಗಳಿಗೆ ಜಿಪಿಎಸ್‌ ಯೋಗ

03:32 PM Apr 15, 2018 | Team Udayavani |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಯೋಜನೆಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ವಾಯವ್ಯ ಕರ್ನಾಟಕ ರಸ್ತೆ
ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಆರ್‌ಟಿಎಸ್‌ ಸಂಸ್ಥೆ ಜಿಪಿಎಸ್‌ ಅಳವಡಿಸಿದೆ.

Advertisement

ಅವಳಿ ನಗರದ ತ್ವರಿತ ಬಸ್‌ ಸಾರಿಗೆ ಸೇವೆ ನೀಡುವ ಬಿಆರ್‌ಟಿಎಸ್‌ಗೆ ಪೂರಕವಾಗಿ ವಾಯವ್ಯ ಸಾರಿಗೆ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಬಿಆರ್‌ಟಿಎಸ್‌ ಬಸ್‌ಗಳು ಒಂದೇ ಪಥದಲ್ಲಿ ಸಂಚಾರ ಮಾಡಿದರೆ ಈ ಬಸ್‌ಗಳಿಗೆ ಪೂರಕವಾಗಿ ನಗರದ ವಿವಿಧ ಭಾಗಗಳಿಂದ ಪ್ರಯಾಣಿಕರನ್ನು ತಲುಪಿಸುವ ಹೊಣೆಗಾರಿಕೆ ವಾಯವ್ಯ ಸಾರಿಗೆ ಮೇಲಿದೆ.

150 ಬಸ್‌ಗೆ ಜಿಪಿಎಸ್‌: ಹು-ಧಾ ಹಾಗೂ ನಗರದ ಇತರೆ ಭಾಗಗಳಿಗೆ ಸಾರಿಗೆ ಸೇವೆ ನೀಡುತ್ತಿರುವ ನಗರ ಸಾರಿಗೆ 1 ಹಾಗೂ 2ನೇ ಘಟಕದ 150 ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಎರಡು ಘಟಕಗಳಿಂದ ಸುಮಾರು 293 ಬಸ್‌ಗಳು ಹು-ಧಾ ಸೇರಿದಂತೆ ಇತರೆ ಭಾಗಗಳಲ್ಲಿ ಇದೀಗ ನಗರ ಸಾರಿಗೆ ಸೇವೆ ನೀಡುತ್ತಿವೆ. ಜನ್‌ನರ್ಮ್ ಯೋಜನೆಯಲ್ಲಿ ನಗರಕ್ಕೆ ನೀಡಿದ ಸುಮಾರು 70 ಬಸ್‌ಗಳಿಗೆ ಕಂಪನಿಯಿಂದಲೇ ಜಿಪಿಎಸ್‌ ಅಳವಡಿಸಲಾಗಿದೆ. ಉಳಿದಂತೆ 80 ಬಸ್‌ ಗಳು ತೀರ ಹಳೆಯದಾಗಿದ್ದು, ಸುಮಾರು 6 ಲಕ್ಷ ಕಿಮೀ ಸಂಚರಿಸಿರುವುದರಿಂದ ಕ್ರಮೇಣ ಗುಜರಿಗೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಆರ್‌ಟಿಎಸ್‌ ಸೇವೆಗೆ ಪೂರಕವಾಗಿ ಸೇವೆ ನೀಡಬಹುದಾದ 150 ಬಸ್‌ಗಳಿಗೆ ಮಾತ್ರ ಜಿಪಿಎಸ್‌ ಅಳವಡಿಸಲಾಗಿದೆ. 

ಹೀಗಿರುತ್ತೆ ನಿರ್ವಹಣೆ: ಬಿಆರ್‌ಟಿಎಸ್‌ ಬಸ್‌ಗಳು ಅತ್ಯಾಧುನಿಕತೆಯಿಂದ ಕೂಡಿವೆ. ಇದಕ್ಕೆ ತಕ್ಕಂತೆ ಪೂರಕ ಸೇವೆ ನೀಡುವ ಬಸ್‌ಗಳ ಕಾರ್ಯಕ್ಷಮತೆ ಹೆಚ್ಚಿಸುವ ಮೊದಲ ಹೆಜ್ಜೆಯಾಗಿ ಜಿಪಿಎಸ್‌ ಅಳವಡಿಕೆಯಾಗಿದೆ.

ನಗರದ ವಿವಿಧ ಭಾಗಗಳಿಂದ ಬಿಆರ್‌ಟಿಎಸ್‌ ನಿಲ್ದಾಣಗಳಿಗೆ ತಲುಪಲು ಬಳಕೆಯಾಗುವ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸೇವೆ ಹಾಗೂ ಬಿಆರ್‌ಟಿಎಸ್‌ ಬಸ್‌ ಎರಡು ಸೇವೆಗಳನ್ನು ಒಗ್ಗೂಡಿಸುವಲ್ಲಿ ಜಿಪಿಎಸ್‌ ಮಹತ್ತರ ಕಾರ್ಯ ವಹಿಸಲಿದೆ. ಹೊಸೂರು ಬಳಿಯ ನಿರ್ವಹಣಾ ಕೇಂದ್ರದ ಮೂಲಕ ಕಾರ್ಯ ನಡೆಯಲಿದೆ. ಬಸ್‌ ಗಳಲ್ಲಿ ಅಳವಡಿಸಿರುವ ಜಿಪಿಎಸ್‌ ವ್ಯವಸ್ಥೆ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲವಾದರೂ ಬಿಆರ್‌ಟಿಎಸ್‌ ಬಸ್‌ಗಳ ಓಡಾಟ ಆರಂಭವಾಗುತ್ತಿದ್ದಂತೆ ಈ ವ್ಯವಸ್ಥೆ
ಕಾರ್ಯರೂಪಕ್ಕೆ ಬರಲಿದೆ. 

Advertisement

ಪ್ರಯೋಜನೆಗಳೇನು?: ಜಿಪಿಎಸ್‌ ಅಳವಡಿಕೆಯಿಂದ ವಾಹನ ಸಂಚಾರದ ಮೇಲೆ ಸಂಪೂರ್ಣ ನಿಗಾ ಸಾಧ್ಯ. ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಚಾಲನ ಸಿಬ್ಬಂದಿಗೆ ಸಂದೇಶ ರವಾನಿಸಬಹುದು. ಸಮಯ ಪಾಲನೆ ಮಾಡಲು ಅತ್ಯವಶ್ಯ. ಮಾರ್ಗ ಬದಲಾವಣೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಚಾಲನಾ ಸಿಬ್ಬಂದಿ ನಿರ್ವಹಣಾ ಕೇಂದ್ರದ ಸಿಬ್ಬಂದಿಯೊಂದಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಯಾವ ನಿಲ್ದಾಣದಲ್ಲಿ ಎಷ್ಟು ಹೊತ್ತು
ನಿಲ್ಲಿಸಲಾಗಿತ್ತು ಸೇರಿದಂತೆ ಎಲ್ಲವನ್ನು ಕೇಂದ್ರೀಕೃತ ಸರ್ವರ್‌ ಸೆಂಟರ್‌ನಿಂದ ಗಮನಿಸಲಾಗುತ್ತದೆ. ಅತೀ ವೇಗದ ಚಾಲನೆ, ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚು ಶಿಸ್ತು ತರಲು ಜಿಪಿಎಸ್‌ ನೆರವಾಗಲಿದೆ.

ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ ವಾಯವ್ಯ ಸಾರಿಗೆ ಸಂಸ್ಥೆ ನಗರದಲ್ಲಿ ಸೇವೆ ನೀಡಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ಜಿಪಿಎಸ್‌ ಅಳವಡಿಸಿರುವುದು ಎರಡು ಸೇವೆಗಳನ್ನು
ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ನೀಡಲು ಸಹಕಾರಿಯಾಗಿದೆ. ಬಿಆರ್‌ಟಿಎಸ್‌ ವತಿಯಿಂದ ಜಿಪಿಎಸ್‌ ಅಳವಡಿಸಲಾಗಿದೆ. 
ಎಂ.ಜಿ. ಹಿರೇಮಠ, ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್‌

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next