Advertisement

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

01:05 AM May 19, 2022 | Team Udayavani |

ಮಂಗಳೂರು: ಕಸ ಸಾಗಾಟದ “ಸ್ವಚ್ಛ ವಾಹಿನಿ’ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ಕಸ ಸಂಗ್ರಹ ವ್ಯವಸ್ಥೆಯ ಮೇಲೆ ತಂತ್ರಜ್ಞಾನ ಆಧರಿತವಾಗಿ ನಿರಂತರ ನಿಗಾ ಇರಿಸುವ ಮೂಲಕ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ.

Advertisement

ಆರಂಭಿಕ ಹಂತದಲ್ಲಿ 23 ಗ್ರಾ.ಪಂ.ಗಳ “ಸ್ವಚ್ಛ ವಾಹಿನಿ’ಗಳಿಗೆ ಜಿಪಿಎಸ್‌ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಈಗಾಗಲೇ 8 ವಾಹನಗಳಿಗೆ ಅಳವಡಿಸಿ ಮಾಹಿತಿ ಪಡೆಯಲಾಗುತ್ತಿದೆ. ಇದರಲ್ಲಿ ಮಂಗಳೂರು ತಾಲೂಕಿನ 22 ಮತ್ತು ಬಂಟ್ವಾಳ ತಾಲೂಕಿನ 13 ಗ್ರಾ.ಪಂ.ಗಳು ಸೇರಿವೆ. ಮುಂದೆ ಎಲ್ಲ ಗ್ರಾ.ಪಂ.ಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಉದ್ದೇಶವೇನು?
ಜಿಲ್ಲೆಯ ಒಟ್ಟು 223 ಗ್ರಾ.ಪಂ.ಗಳ ಪೈಕಿ ಈಗಾ ಗಲೇ 169 ಗ್ರಾ.ಪಂ.ಗಳಿಗೆ ಕಸ ಸಂಗ್ರಹಣೆಗಾಗಿ “ಸ್ವಚ್ಛವಾಹಿನಿ’ ಒದಗಿಸಲಾಗಿದೆ. ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಂಗಳೂರು ತಾಲೂಕಿನ ತೆಂಕಎಡಪದವಿನಲ್ಲಿ ರಾಜ್ಯದ ಎರಡನೇ ಎಂಆರ್‌ಎಫ್ (ಸಮಗ್ರ ಘನತ್ಯಾಜ್ಯ ನಿರ್ವಹಣೆ ಕೇಂದ್ರ) ಘಟಕ ಸ್ಥಾಪನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು, ಗ್ರಾಮ ಮಟ್ಟದಲ್ಲಿ ಮಿನಿ ಎಂಆರ್‌ಎಫ್ ಘಟಕಗಳ ಸ್ಥಾಪನೆಗೂ ಉದ್ದೇಶಿಸಲಾಗಿದೆ. ಹಾಗಾಗಿ ಕಸ ಸಂಗ್ರಹಣ ವ್ಯವಸ್ಥೆ ಸಮರ್ಪಕವಾಗಬೇಕೆಂಬ ಉದ್ದೇಶದಿಂದ ಜಿಪಿಎಸ್‌ ಅಳವಡಿಸಲಾಗುತ್ತಿದೆ. ವಾಹನ ಯಾವ ಭಾಗಕ್ಕೆ ಸಂಚರಿಸಿದೆ, ಯಾವ ಹೊತ್ತಿನಲ್ಲಿ ಕಾರ್ಯಾರಂಭ ಮಾಡಿದೆ ಎಂಬಿತ್ಯಾದಿ ನಿಖರ ಮಾಹಿತಿಯನ್ನು ಜಿಪಿಎಸ್‌ ನೆರವಿನಿಂದ ಸಂಗ್ರಹಿಸಲಾಗುತ್ತಿದೆ. ವಾಸ್ತವವಾಗಿ ಲಭ್ಯವಾಗುತ್ತಿರುವ ಕಸದ ಪ್ರಮಾಣವನ್ನು ಕೂಡ ಇದರ ಮೂಲಕ ಲೆಕ್ಕಾಚಾರ ಹಾಕಿಕೊಳ್ಳಬಹುದು.

ಏಕಕಾಲಕ್ಕೆ ಮಾಹಿತಿ ರವಾನೆ
ಸದ್ಯ ಜಿಲ್ಲೆಯ ಹೆಚ್ಚಿನ ಗ್ರಾ.ಪಂ.ಗಳು ಒಣಕಸವನ್ನು ಸಂಗ್ರಹಿಸುತ್ತಿವೆ. ಕೆಲವು ಗ್ರಾ.ಪಂ.ಗಳು (ಸೆಮಿಅರ್ಬನ್‌ ಪ್ರದೇಶ) ಮಾತ್ರ ಒಣ ಮತ್ತು ಹಸಿ ಕಸ ಎರಡನ್ನೂ ಸಂಗ್ರಹಿಸುತ್ತಿವೆ. ನಿಗದಿತ ದಿನದಂದು ಪ್ರತೀ ಮನೆಗೂ ವಾಹನಗಳು ತೆರಳಬೇಕೆಂದು ಸೂಚಿಸಲಾಗಿದೆ. ರೂಟ್‌ ಮ್ಯಾಪ್‌ ಮಾಡಿಕೊಡಲಾಗಿದೆ. ಅದು ಯಾವ ರೀತಿ ಕಾರ್ಯಗತಗೊಳ್ಳುತ್ತಿದೆ ಎಂಬ ಮಾಹಿತಿ ಜಿಪಿಎಸ್‌ ಮೂಲಕ ಗ್ರಾ.ಪಂ. ಪಿಡಿಒ ಮಾತ್ರವಲ್ಲದೆ ಜಿ.ಪಂ.ನ ಅಧಿಕಾರಿಗಳಿಗೂ ಏಕಕಾಲದಲ್ಲಿ ರವಾನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ 25 ಗ್ರಾ.ಪಂ.ಗಳ ಒಟ್ಟು ಘನ ತ್ಯಾಜ್ಯ ನಿರ್ವಹಣೆಯ ಮೇಲೆ ನಿಗಾ ಇರಿಸಲು ಸಾಫ್ಟ್ವೇರ್‌ ರೂಪಿಸಲು ನಿರ್ಧರಿಸಲಾಗಿದೆ.

ನಿರ್ದಿಷ್ಟ ಸಮಯದಲ್ಲಿ ನಿಗದಿತ ಸ್ಥಳದಿಂದ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದರ ಮೇಲ್ವಿಚಾರಣೆಯ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಗ್ರಾ.ಪಂ.ಗಳ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತಿದೆ. ಈಗ ಪ್ರಾಯೋಗಿಕವಾಗಿ 23 ಗ್ರಾ.ಪಂ.ಗಳಲ್ಲಿ ಅಳವಡಿಸಿ ಮುಂದೆ ಎಲ್ಲ ವಾಹನಗಳಿಗೂ ಜಿಪಿಎಸ್‌ ಅಳವಡಿಸುವ ಚಿಂತನೆ ಇದೆ.
– ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ.

Advertisement

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next