ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಸಂಬಂಧಿಸಿದ ಜಿ.ಪಿ.ಎಸ್ ಸರ್ವೆಯ ನಕಾಶೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಜಿಲ್ಲಾದ್ಯಂತ ಅರಣ್ಯವಾಸಿಯ ಸುಮಾರು ೫೦೦೦೦ ಕ್ಕೂ ಮಿಕ್ಕಿ ಜಿ.ಪಿ.ಎಸ್ ದಾಖಲೆಗಳು ಅತಂತ್ರವಾಗಲಿದೆ ಎಂಬ ಆತಂಕದ ಅಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಕಳವಳ ವ್ಯಕ್ತಪಡಿಸಿದರು.
ಸೋಮವಾರ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯ ಇಲಾಖೆವಾರು ಕಾನೂನು ಮಾನ್ಯತೆ ಇಲ್ಲದ ಸಾವಿರಾರು ಜಿ.ಪಿ.ಎಸ್ ನಕಾಶೆಯನ್ನು ಪ್ರದರ್ಶಿಸಿ ಮಾತನಾಡಿದರು.
ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಕಾನೂನಿನ ಮಾನ ದಂಡದ ಹೊರತಾಗಿ ಜಿ.ಪಿ.ಎಸ್ ನಕಾಶೆ ತಯಾರಿಸಿ ಅರಣ್ಯವಾಸಿಯ ಪ್ರಕರಣದ ಕಡತದಲ್ಲಿ ಸೇರಿಸಲಾಗಿದೆ. ವಲಯ ಅರಣ್ಯ ಅಧಿಕಾರಿ, ಕಂದಾಯ ಅಧಿಕಾರಿ, ಅರಣ್ಯ ಹಕ್ಕು ಸಮಿತಿ ದೃಢೀಕರಣವಿಲ್ಲದ ಜಿ.ಪಿ.ಎಸ್ ನಕಾಶೆಗೆ ಕಾನೂನು ಮಾನ್ಯತೆ ಇರುವುದಿಲ್ಲ ಎಂದು ಹೇಳಿದರು.
ಮಂಜೂರಿ ಪ್ರಕ್ರಿಯೆಯಲ್ಲಿ ಅಪೂರ್ಣ ಜಿಪಿಎಸ್ ನಕಾಶೆ ಅರಣ್ಯ ಹಕ್ಕು ಸಮಿತಿಗಳ ಸ್ವೀಕಾರ ಅರ್ಹ ದಾಖಲೆ ಆಗಿದ್ದು ಇರುವುದಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಮೇ ೨೦೧೦ ರಂದು ನೀಡಿದ ಆದೇಶವನ್ನ ಮತ್ತು ಕರ್ನಾಟಕ ಅರಣ್ಯ ಕಾಯಿದೆಯಲ್ಲಿನ ಅಂಶ ಸ್ಪಷ್ಟವಾಗಿ ಇರುತ್ತದೆ ಎಂದು ಅವರು ಹೇಳಿದರು.
ಈ ವೇಳೆ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಪ್ರಮುಖರಾದ ರಮೇಶ ಮರಾಠಿ, ಗಂಗೂಬಾಯಿ ರಜಪೂತ್, ನಾಗರಾಜ ದೇವಸ್ಥಲ್, ರಾಘವೇಂದ್ರ ಶೆಟ್ಟಿ, ನವೀನ್ ಜೈನ್, ಶಿವು ಮರಾಠಿ, ಗಣಪ ಗೌಡ, ಯಶೋದ, ಕಲ್ಪನಾ ಪಾವಸ್ಕರ, ಅಬ್ದುಲ್ ರಪೀಕ್ ಗಫಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿನ ಅರಣ್ಯವಾಸಿಗಳ ಜಿ.ಪಿ.ಎಸ್ ಸರ್ವೆಯ ಮಾನ್ಯತೆಯಲ್ಲಿ ಕಾನೂನು ತೊಡಕು ಸಾಮೂಹಿಕವಾಗಿ ಉಂಟಾಗಲೂ ಅರಣ್ಯ ಇಲಾಖೆ ಜವಾಬ್ದಾರಿ ವೈಫಲ್ಯ ಕಾರಣ.
– ರವೀಂದ್ರ ನಾಯ್ಕ ಹೋರಾಟಗಾರ
ಇದನ್ನೂ ಓದಿ: Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…