Advertisement

ಗೌರಿ ಹೊಳೆಯ ರಸ್ತೆ ಬದಿ ಕುಸಿತ: ಆತಂಕ

08:59 PM Jul 28, 2021 | Team Udayavani |

ಪುತ್ತೂರು: ಮೈಸೂರು, ಮಡಿಕೇರಿಯಿಂದ ಪ್ರಮುಖ ಯಾತ್ರಾಸ್ಥಳ ಧರ್ಮಸ್ಥಳವನ್ನು ಬೆಸೆಯುವ ಬೆಳ್ಳಾರೆ – ಪೆರುವಾಜೆ -ಸವಣೂರು ರಸ್ತೆ ಅಭಿ ವೃದ್ಧಿಗೊಳ್ಳುತ್ತಿರುವ ಹಂತದಲ್ಲೇ ಬದಿ ಕುಸಿದಿದ್ದು ಸಂಚಾರ ಸುರಕ್ಷತೆಗೆ ಆತಂಕ ಎದುರಾಗಿದೆ.

Advertisement

ರಸ್ತೆ ಅಭಿವೃದ್ಧಿ ವೇಳೆ ತಡೆಗೋಡೆ ನಿರ್ಮಿಸದಿರುವುದು ಹಾಗೂ ಅರಣ್ಯದ ನಡುವೆ ಹಾದು ಹೋಗಿರುವ ರಸ್ತೆಯ ಬದಿ ಯಲ್ಲಿ ಸಮರ್ಪಕ ಚರಂಡಿ ನಿರ್ಮಿಸದೆ ಇರುವುದು ಕುಸಿತಕ್ಕೆ ಕಾರಣವಾಗಿದ್ದು ದಿನೇ ದಿನೇ ಅಪಾಯ ಹೆಚ್ಚಾಗುತ್ತಿದೆ.

ರಸ್ತೆ ಬದಿ ಹೊಳೆ ಪಾಲು:

ಪೆರುವಾಜೆ ಗ್ರಾಮದ ಮಾಪಮಜಲು ಬಳಿ ಗೌರಿ ಹೊಳೆಗೆ ತಾಗಿಕೊಂಡಿರುವ ರಸ್ತೆಯ ಒಂದು ಬದಿ ಕುಸಿದಿದೆ. ರಸ್ತೆಗೆ ಅಳವಡಿಸಿರುವ ದೂರ ದಾಖಲೆಯ ಕಲ್ಲು ಸಹಿತ ರಸ್ತೆ ಅಂಚು ಕುಸಿದು ಹೊಂಡ ರೂಪ ಪಡೆದಿದೆ. ಹೊಳೆ ಬದಿಯ ಮರವು ನೀರು ಪಾಲಾಗಿದೆ. ಮಳೆ ಪ್ರಮಾಣ ಹೆಚ್ಚಾದಂತೆ ಹೊಳೆಯಲ್ಲಿ ನೀರು ಹೆಚ್ಚಾಗಿ ರಸ್ತೆ ಕೂಡ ಹೊಳೆ ಪಾಲಾಗುವ ಸಾಧ್ಯತೆ ಇದೆ.

ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ:

Advertisement

ಈ ರಸ್ತೆಯು ಮಾಸ್ತಿಕಟ್ಟೆಯಿಂದ- ಕಾಪುಕಾಡಿನ ತನಕ ಸುಳ್ಯ ಲೋಕೋಪ ಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ಕೆಲವು ತಿಂಗಳ ಹಿಂದೆ 3.5 ಕೋ.ರೂ.ವೆಚ್ಚದಲ್ಲಿ ಮಧ್ಯಮ ಪಥದ ರಸ್ತೆ ನಿರ್ಮಿಸಲಾಗಿದೆ. ಅಲ್ಲಲ್ಲಿ ಅಂತಿಮ ಹಂತದ ಕಾಮಗಾರಿಗಳು ಬಾಕಿ ಇದೆ. ಮಾಪಮಜಲು ಬಳಿ ರಸ್ತೆಗೆ ತಾಗಿಕೊಂಡು ಹರಿಯುವ ಗೌರಿ ಹೊಳೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಪೆರುವಾಜೆ ಗ್ರಾ.ಪಂ. ಸಹಿತ ಸ್ಥಳೀಯರು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಸ್ಪಂದಿಸದ ಅಧಿಕಾರಿಗಳು ಹೊಳೆಬದಿಗೆ ಮಣ್ಣು ಹಾಕಿ ಕಾಮಗಾರಿ ನಡೆಸಿದ್ದರು. ಪರಿಣಾಮ ಹೊಳೆ ನೀರಿಗೆ ಸಿಲುಕಿ ಮಣ್ಣು ಕೊಚ್ಚಿ ಹೋಗಿದ್ದು ರಸ್ತೆ ಕುಸಿತ ಪ್ರಾರಂಭಗೊಂಡಿದೆ.

ಉರುಳಲು ಕಾದಿರುವ  ಮರಗಳು:

ಇದೇ ರಸ್ತೆಯ ಕಾಪುಕಾಡಿನಲ್ಲಿ ಹತ್ತಾರು ಬೃಹತ್‌ ಗಾತ್ರದ ಮರಗಳು ರಸ್ತೆಗೆ ಉರುಳಿ ಬೀಳುವ ಹಂತದಲ್ಲಿದೆ. ರಸ್ತೆಯ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದ್ದು ಅದರ ಮೇಲ್ಭಾಗದಲ್ಲಿರುವ ಮರಗಳು ರಸ್ತೆಗೆ ಬಾಗಿದೆ. ದಿನಂಪ್ರತಿ ಸರಕಾರಿ ಬಸ್‌ ಸಹಿತ ನೂರಾರು ವಾಹನಗಳು ಸಂಚರಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಸುತ್ತು ಬಳಕೆ ತಪ್ಪಿದೆ :

ಮೈಸೂರು, ಮಡಿಕೇರಿ, ಕಾಸರಗೋಡು ಭಾಗದವರು ಕಡಿಮೆ ಅವಧಿಯಲ್ಲಿ ಧರ್ಮಸ್ಥಳಕ್ಕೆ ತಲುಪಲು ಈ ರಸ್ತೆ ಪ್ರಯೋಜನಕಾರಿಯಾಗಿದೆ. ಶಾಂತಿಗೋಡು ಬಳಿ ಕುಮಾರಾಧಾರಾ ನದಿಗೆ ಸೇತುವೆ ನಿರ್ಮಿಸಿದ ಬಳಿಕ ಧರ್ಮಸ್ಥಳಕ್ಕೆ ಸುತ್ತುಬಳಸಿ ಹೋಗಬೇಕಾದ ಪ್ರಮೇಯ ತಪ್ಪಿದ್ದು ಮೈಸೂರು ಭಾಗದ ಪ್ರಯಾಣಿಕರು ಈ ರಸ್ತೆಯ ಮೂಲಕವೇ ಸಂಚರಿಸುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ ಕೂಡ ಸಂಚರಿಸುತ್ತಿದೆ.

ಮಧ್ಯಮ ಪಥದ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಹೊಳೆ ಭಾಗಕ್ಕೆ ತಡೆಗೋಡೆ ನಿರ್ಮಿಸಲು ಗ್ರಾ.ಪಂ. ಮೂಲಕ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿದೆ.ಅದಕ್ಕೆ ಸ್ಪಂದನೆ ನೀಡಿಲ್ಲ. ಅಪಾಯ ಉಂಟಾದರೆ ಅದಕ್ಕೆ ಇಲಾಖೆಯೇ ಹೊಣೆ ಹೊರಬೇಕು. -ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷರು, ಪೆರುವಾಜೆ ಗ್ರಾ.ಪಂ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next