ಮಂಗಳೂರು: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿ ಅವರ ಹತ್ಯೆ ನಡೆದು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇದೀಗ ಗೌರಿ ಲಂಕೇಶ್ ಅವರ ಹತ್ಯೆ ಆತಂಕ ಸೃಷ್ಟಿಸಿದೆ. ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಏನು ಮಾಡುತ್ತಿವೆ ಎಂದು ರಾಜ್ಯ ಸರಕಾರ ಉತ್ತರಿಸಬೇಕು ಎಂದರು. ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ವಿಧಿಸಬೇಕು ಎಂದರು.
ಸಚಿವ ರಮಾನಾಥ ರೈ ಅವರಿಗೆ ಜವಾಬ್ದಾರಿ ಇದೆ ಎಂದಾದರೆ ಈಗಾಗಲೇ ಜಿಲ್ಲೆಯಲ್ಲಿ ಆಗಿರುವ ಘಟನೆಗಳಿಗೆ ಸಂಬಂಧಿಸಿ ಕ್ಷಮೆ ಯಾಚಿಸಬೇಕಿತ್ತು. ಆದರೆ ಅವರು ಉದ್ಧಟತನ ತೋರಿಸುತ್ತಿದ್ದಾರೆ. ಹೀಗೆ ಮಾಡಿದರೆ ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂಬುದನ್ನು ಇನ್ನಾದರೂ ಅರಿತುಕೊಳ್ಳಬೇಕಾಗಿದೆ ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದರು.
ಸಚಿವ ಖಾದರ್ ಅವರು ಮಂಗಳೂರು ಚಲೋ ವಿರುದ್ಧ ಹೇಳಿಕೆ ನೀಡುವಾಗ ತನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆಂದು ಆಕ್ಷೇಪಿಸಿದ ಜನಾರ್ದನ ಪೂಜಾರಿ, ನನ್ನ ಹೆಸರು ಹೇಳದೆ ಅವರಿಗೆ ಹೇಳಿಕೆ ನೀಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಅಜಿತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಸಾಮರಸ್ಯ ನಡಿಗೆಗೆ ವಿರೋಧವಿಲ್ಲ
ಬಿಜೆಪಿಯವರು ಹಮ್ಮಿಕೊಂಡಿರುವ ಮಂಗಳೂರು ಚಲೋ ಸಮಂಜಸವಲ್ಲ. ನಗರದಲ್ಲಿ ಕೋಮು ಜ್ವಾಲೆ ಉರಿಯುತ್ತಿರುವಾಗ ಕಾನೂನು ಕೈಗೆತ್ತಿಕೊಳ್ಳುತ್ತಿರುವುದು ಸರಿಯಲ್ಲ ಎಂದ ಅವರು, ಸಾಮರಸ್ಯದ ನಡಿಗೆ ಯಾರೂ ಮಾಡಿದರೂ ನನ್ನ ವಿರೋಧವಿಲ್ಲ; ಆರೋಗ್ಯ ಸರಿ ಇದ್ದರೆ ನಾನೂ ಭಾಗವಹಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.