Advertisement

ಗೌರಿ ಲಂಕೇಶ ಹತ್ಯೆಗೆ ವ್ಯಾಪಕ ಆಕ್ರೋಶ

09:50 AM Sep 07, 2017 | Team Udayavani |

ಕಲಬುರಗಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಬುಧವಾರ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಲಾಯಿತು.

Advertisement

ಪ್ರಗತಿಪರ ಸಂಘಟನೆಗಳ ಒಕ್ಕೂಟ, ವಿಚಾರವಾದಿಗಳು, ಪತ್ರಕರ್ತರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಎಬಿವಿಪಿ, ಪಾಪುಲ್ರ ಫ್ರಂಟ್‌ ಇಂಡಿಯಾ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಹತ್ಯೆಯನ್ನು ಬಲವಾಗಿ ಖಂಡಿಸಿದವು.

ಪ್ರಗತಿಪರ ಸಂಘಟನೆಗಳ ಒಕ್ಕೂಟ: ಕೋಮುವಾದಿ, ವೈದಿಕ ಶಾಹಿಗಳಿಗೆ ಸಿಂಹಸ್ವಪ್ನರಾಗಿದ್ದ ಹಾಗೂ ಪ್ರಗತಿ ವಿಚಾರಧಾರೆ ಮೈಗೂಢಿಸಿಕೊಂಡಿದ್ದ ಪತ್ರಕರ್ತೆ ಗೌರಿ ಲಂಕೇಶ ಅವರ ಪ್ರಗತಿಪರತೆಯನ್ನು ಒಪ್ಪದವರು ಹತ್ಯೆ ಮಾಡಿದ್ದಾರೆ. ಡಾ| ಎಂ.ಎಂ. ಕಲಬುರಗಿ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಲ್ಲಿ ಈ ಹತ್ಯೆ ನಡೆಯುತ್ತಿರಲಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಹೊಣೆ ಎಂದು ಒಕ್ಕೂಟದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್‌ ವ್ಯವಸ್ಥೆ, ಸರ್ಕಾರಗಳು ಪ್ರಗತಿಪರರಿಗೆ ರಕ್ಷಣೆ ಇಲ್ಲ ಎಂಬುದಾಗಿ ಘೋಷಣೆ ಮಾಡಲಿ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆ. ಇನ್ನು ಮುಂದೆಯಾದರೂ ಕುಂಬಕರ್ಣ ನಿದ್ದೆಯಿಂದ ಹೊರ ಬಂದು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಮೀನಾಕ್ಷಿ ಬಾಳಿ, ರವೀಂದ್ರ ಶಾಬಾದಿ, ಪ್ರೊ|ಕಾಶೀನಾಥ ಅಂಬಲಗೆ, ಆರ್‌.ಕೆ.ಹುಡಗಿ, ಜಂಗನಗೌಡ ಶೀಲವಂತ, ಸೂರ್ಯಕಾಂತ ನಿಂಬಾಳಕರ, ದತ್ತಾತ್ರೇಯ ಇಕ್ಕಳಕಿ, ಅಬ್ದುಲ್‌ ಹಮೀದ್‌, ಅಶೋಕ ಶೆಟಕಾರ, ಪ್ರಭು ಖಾನಾಪುರೆ, ಶಂಕ್ರಯ್ಯ ಘಂಟಿ, ಅಯ್ಯಣ್ಣ ಬಳಬಟ್ಟಿ, ಸಿದ್ಧರಾಮ ಯಳವಂತಗಿ, ರಾಹುಲ್‌ ಕಟ್ಟಿ, ಸೂರ್ಯಕಾಂತ ಸೊನ್ನದ ಮುಂತಾದವರಿದ್ದರು.

Advertisement

ಪತ್ರಕರ್ತರ ಸಂಘ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ಪದಾಧಿಕಾರಿಗಳು, ಪತ್ರಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಇಂತಹ ಅನಾಗರಿಕ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಡಿ. ಶಿವಲಿಂಗಪ್ಪ, ಎಸ್‌.ಬಿ.ಜೋಶಿ, ಶಿವರಾಯ ದೊಡ್ಮನಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶಿವರಂಜನ್‌ ಸತ್ಯಂಪೇಟೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಾಪ್ಯುಲರ ಫ್ರಂಟ್‌: ವಿಚಾರವಾದಿಗಳನ್ನು ಹತ್ಯೆ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಸರ್ಕಾರಗಳು ದುಷ್ಕರ್ಮಿಗಳ ಷಡ್ಯಂತ್ರ ಬಯಲಿಗೆಳೆಯಲು ವಿಫಲವಾಗಿವೆ ಎಂದು ಪಾಪ್ಯುಲರ ಫ್ರಂಟ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆರೋಪಿಸಿದರು. ವಿಚಾರವಾದಿಗಳಿಗೆ ಸೂಕ್ತ ಭದ್ರತೆ ಒದಗಿಸುವುದರ ಜತೆಗೆ ಗೌರಿ ಲಂಕೇಶ ಅವರ ಈ ಹತ್ಯೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಮೊಹಮ್ಮದ ಮೋಹಸಿನ ಮುಂತಾದವರಿದ್ದರು. ಆವಿಷ್ಕಾರ 

ಪ್ರಗತಿಪರ ಸಾಂಸ್ಕೃತಿಕ ವೇದಿಕೆ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೇಷನ್‌, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂಥ್‌ ಆರ್ಗನೇಷನ್‌ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಕೆ.ಎ. ಕಲಬುರಗಿ, ವಿ.ಜಿ.ದೇಸಾಯಿ, ರಮೇಶ ಲಂಡನಕ್‌, ಅಂಬಾರಾಯ ಉಪಳಾಂವಕರ್‌, ಜೀವನಕುಮಾರ ಮುಂತಾದವರಿದ್ದರು.

ಎಬಿವಿಪಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕಿರಣ ಬಿರಾದಾರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next