ಬೆಂಗಳೂರು: ಮುಂಗಳವಾರ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ (55)ಅವರ ಅಂತ್ಯಕ್ರಿಯೆ ಇಂದು ಸಂಜೆಯ ವೇಳೆಗೆ ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆನಡೆಯಲಿದ್ದು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಅಂತ್ಯಕ್ರಿಯೆಯಲ್ಲಿ ಯಾವುದೇ ವಿಧಿ ವಿಧಾನಗಳನ್ನು ಪಾಲಿಸಲಾಗುತ್ತಿಲ್ಲ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಬಳಿಕ ರವೀಂದ್ರ ಕಲಾ ಕ್ಷೇತ್ರದಲ್ಲಿ 3 ಗಂಟೆಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಅಂತಿಮ ದರ್ಶನ ಪಡೆದರು. ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಆಸ್ಪತ್ರೆಗೂ ಪ್ರಗತಿಪರ ಚಿಂತಕರು, ಚಿತ್ರರಂಗದ ಗಣ್ಯರು ಆಗಮಿಸಿದ್ದು, ಬಹುಭಾಷಾ ನಟ ಪ್ರಕಾಶ್ ರೈ, ದಿನೇಶ್ ಅಮೀನ್ ಮಟ್ಟು, ನಿರ್ಮಾಪಕ ಕೆ.ಮಂಜು ಮೊದಲಾದವರು ಆಗಮಿಸಿದ್ದರು.
ತಾಯಿ, ಸಹೋದರಿ ಕವಿತಾ ಲಂಕೇಶ್, ಸಹೋದರ ಇಂದ್ರಜಿತ್ ಸೇರಿದಂತೆ ಬಂಧುಗಳು ಮೃತದೇಹದ ಬಳಿ ತೀವ್ರ ಕಂಬನಿ ಮಿಡಿಯುತ್ತಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ರಾತ್ರಿ 7.45ರ ವೇಳೆ ಹೊರಗೆ ಹೋಗಿದ್ದ ಗೌರಿ ಲಂಕೇಶ್, ಕಾರಿನಿಂದ ಇಳಿದು ಮನೆ ಬೀಗ ತೆಗೆಯಲು ಮುಂದಾಗುತ್ತಿದ್ದಂತೆ, ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ ಹತ್ಯೆಗೈದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತನಿಖೆಗೆ ಆದೇಶಿಸಿದ್ದಾಗಿ ತಿಳಿಸಿದ್ದಾರೆ.
ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದ!
ದುಷ್ಕರ್ಮಿ ತೀರಾ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆಗೈದಿರುವುದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಮತ್ತು ನೆರೆ ಹೊರೆಯವರ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.ಮರಣೋತ್ತರ ಪರೀಕ್ಷೆಯಲ್ಲಿ ಹೃದಯಕ್ಕೆ ಗುಂಡು ಹೊಕ್ಕಿರುವುದು ಧೃಡಪಟ್ಟಿದೆ.