ಅದೆಷ್ಟೇ ಬಡತನವಿದ್ದರೂ, ಗೌರಿಹಬ್ಬಕ್ಕೆ ಮಗಳಿಗೆ ಉಡುಗೊರೆ ಕೊಡಲು ಹೆತ್ತವರು ಆಸೆಪಡುತ್ತಾರೆ. ಹೀಗೆ ದೊರಕಿದ ಕಾಣಿಕೆ ಯಾವುದೇ ಆಗಿದ್ದರೂ, ಅದನ್ನು ಕಣ್ಣಿಗೆ ಒತ್ತಿಕೊಂಡು ಹೆಣ್ಮಕ್ಕಳು ಸಂಭ್ರಮಿಸುತ್ತಾರೆ. ಹಬ್ಬಕ್ಕೆ ಕರೆಯಲು ಅಣ್ಣನೋ/ಅಪ್ಪನೋ ಬಂದಾಗಂತೂ ಜಗವ ಗೆದ್ದ ಖುಷಿ! ಅಂಥದೇ ಸಡಗರದ ಕ್ಷಣವನ್ನು, ತವರಿನಲ್ಲಿ ಮೊದಲ ಬಾರಿ ಗೌರಿಹಬ್ಬ ಆಚರಿಸಿದಾಗ ಆಗಿದ್ದ ಸಡಗರವನ್ನು ಲೇಖಕಿ ಇಲ್ಲಿ ಹೇಳಿಕೊಂಡಿದ್ದಾರೆ…
ಶ್ರಾವಣ ಮಾಸ ಬಂದಾಗ ಹೆಣ್ಣುಮಕ್ಕಳಿಗೆ ಹಬ್ಬಗಳ ಸಾಲುಸಾಲು ಸಂಭ್ರಮ. ನವ ವಿವಾಹಿತೆಯ ಖುಷಿಯನ್ನಂತೂ ಕೇಳಲೇಬೇಡಿ. ಮದುವೆ ನಂತರ, ಮೊದಲನೇ ಗೌರಿ ಹಬ್ಬವನ್ನು ತವರಲ್ಲಿ ಆಚರಿಸುವುದರಿಂದ ಅಲ್ಲಿನ ಸಂಭ್ರಮ ನೂರುಪಟ್ಟು ಹೆಚ್ಚು. ಸಾಮಾನ್ಯವಾಗಿ, ಅಪ್ಪ ಮತ್ತು ಅಣ್ಣ-ತಮ್ಮಂದಿರು ಪ್ರತಿ ಗೌರಿ ಹಬ್ಬಕ್ಕೆ, ಹೆಣ್ಣುಮಕ್ಕಳಿಗೆ ಉಡುಗೊರೆ, ಮಂಗಳದ್ರವ್ಯಕ್ಕಾಗಿ ದುಡ್ಡು, ಶೃಂಗಾರ ಸಾಮಗ್ರಿಗಳನ್ನು ಕೊಡುವುದು ವಾಡಿಕೆ. ಪ್ರತಿ ವರ್ಷವೂ ತವರಿನ ಉಡುಗೊರೆಯನ್ನು ಅಕ್ಕರೆಯಿಂದ ಎದುರು ನೋಡುವ ಪುಟ್ಟ ಮಗುವಿನ ಮನಸ್ಸು, ಮದುವೆಯಾಗಿ ದಶಕಗಳೇ ಕಳೆದರೂ ಹಾಗೆಯೇ ಇದೆ.
ಹಬ್ಬದ ಹಿಂದಿನ ದಿನ ಬಿದಿಗೆಯಂದೇ, ಬೆಳಗ್ಗೆ ಬೇಗ ಏಳುವುದರಲ್ಲೂ ಒಂದು ಖುಷಿ. ನಾ ಮುಂದು ತಾ ಮುಂದು ಅಂತ ಕಾಫಿ, ಅಭ್ಯಂಜನ ಸ್ನಾನ ಮಾಡಿ, ದೇವರ ಕೋಣೆಯನ್ನು ಲಕಲಕ ಹೊಳೆವಂತೆ ಮಾಡಿ, ಅಡುಗೆಮನೆ ಕಡೆ ಹೊರಟರೆ ಹೋಳಿಗೆ, ಚಕ್ಕುಲಿ, ಮುತ್ಸರ್ಯ, ರವೆ ಉಂಡೆ ಮಾಡುವ ಕೆಲಸ ಶುರು. ಅತ್ತಿಗೆ, ಅಮ್ಮನೊಡನೆ ಹರಟೆಯ ಹೊಡೆಯುತ್ತಾ ಸಮಯ ಹೋಗುವುದೇ ತಿಳಿಯುವುದಿಲ್ಲ. ಎÇÉೋ ಕೇಳಿದ ಹಾಡಿನ ಬಗ್ಗೆ, ಹೊಸದಾಗಿ ಕಲಿತ ರಂಗೋಲಿಯ ಬಗ್ಗೆ, ಡಿಸೈನ್ ಗೆಜ್ಜೆ ವಸ್ತ್ರಗಳ ಬಗ್ಗೆ, ಊರಲ್ಲಿರುವ ಇನ್ನೊಬ್ಬ ಅತ್ತಿಗೆಯ ಬಗ್ಗೆ, ಮಕ್ಕಳ ಬಗ್ಗೆ… ಮಾತಾಡಲು ವಿಷಯ ಒಂದೇ ಎರಡೇ. ತುಂಬು ಸಂಸಾರದ ಮಜವೇ ಬೇರೆ.
ಮನೆಯ ಗಂಡಸರು, ಫಲವಸ್ತ್ರ, ಬಾಳೆಕಂದು ಮತ್ತು ಮಾವಿನ ತೋರಣದಿಂದ ಮಂಟಪ ಕಟ್ಟುವ ಕೆಲಸವನ್ನು ಮುಗಿಸಿದ ನಂತರ, ಹೆಣ್ಣುಮಕ್ಕಳು ಪದ್ಮದ ರಂಗೋಲಿ ಹಾಕಿ ಅದಕ್ಕೆ ಬಣ್ಣ ತುಂಬಿ, ಮಂಟಪದಲ್ಲಿ ಒಂದು ಬೆಳ್ಳಿ ತಟ್ಟೆ ಇಟ್ಟು, ಬಾಳೆ ಎಲೆ ಹಾಸಿ ಅದರ ಮೇಲೆ ಸ್ವಲ್ಪ ಅಕ್ಕಿ ಇಟ್ಟು ಗೌರಿಗೆ ಆಸನ ಸಿದ್ಧಪಡಿಸಬೇಕು. ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಒಬ್ಬರ ಕೆಲಸವಾದರೆ ಹೊಸ್ತಿಲಿಗೆ ರಂಗೋಲಿ ಇಡುವ ಕಾರ್ಯಕ್ರಮ ಇನ್ನೊಬ್ಬರದ್ದು. ಒಂದರ ನಂತರ ಒಂದು, ಎಡೆಬಿಡದೆ ಸಾಲಾಗಿ ಬರುವ ಇರುವೆಯಂತೆ ಕೆಲಸ. ಇದಲ್ಲವೇ ಸಂಸಾರದಲ್ಲಿ ಸಾಮರಸ್ಯ ಉಳಿಸಿ, ಬೆಳೆಸುವ ವಿಧಿ ವಿಧಾನ…ಎಲ್ಲವೂ ಒಂದಷ್ಟು ಹೆಚ್ಚಿನ ಶ್ರಮ ಕೊಡುವ ಕೆಲಸವೇ ಆದರೂ, josh was high throughout the day.
ಮದುವೆಯ ಮೊದಲನೇ ವರ್ಷ ಆಚರಿಸುವ ಹಬ್ಬದ ಸಡಗರವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಆಗ 5 ಜನ ಮುತ್ತೈದೆಯರಿಗೆ ಬಾಗಿನ ಕೊಡುವುದು ಪದ್ಧತಿ. ಬಾಗಿನದ ಸಾಮಾನುಗಳನ್ನು ಜೋಡಿಸಿ, 5 ಬಗೆಯ ತಿಂಡಿಗಳನ್ನಿಟ್ಟು, ಕಾಯಿ, ದಕ್ಷಿಣೆಯನ್ನು ಸೇರಿಸಬೇಕು. ಅದರಲ್ಲೊಂದು ತಾಯಿಯ ಬಾಗಿನ. ಅದರಲ್ಲಿ ರೇಷ್ಮೆ ಸೀರೆ ಸಹ ಇಟ್ಟು ರೆಡಿ ಮಾಡಿಕೊಂಡಿದ್ದಾಯಿತು. ಇಷ್ಟು ವರ್ಷ ತಾಯಿ ಮಕ್ಕಳಿಗೆ ಕೊಡಿಸಿರುವ ಸೀರೆಗಳೆಷ್ಟೋ, ಮೊದಲ ಬಾರಿಗೆ ಹೆಣ್ಣು ಮಗಳು ತಾಯಿಗೆ ಸೀರೆ ಕೊಡುವಾಗ ಅವಳ ಖುಷಿ ವರ್ಣಿಸಲಾಗದು. ಹಾಗೆಯೇ, ತಾಯಿಗೂ ಕೂಡ ಭಾವುಕಳಾಗುವ ಸನ್ನಿವೇಶ. ಗೌರಿ ಹಬ್ಬಕ್ಕೆ ತಂದಿರುವ ಹೊಸ ಬಳೆಗಳನ್ನೆಲ್ಲ ಇಟ್ಟು, ಸಂಜೆ ದೇವರಿಗೆ ದೀಪ ಹಚ್ಚಿ, ಬಳೆಗಳಿಗೂ ಪೂಜೆ ಮಾಡಿ ದೇವರಲ್ಲಿ ಮುತ್ತೈದೆತನದ ಆಯಸ್ಸು ಹೆಚ್ಚಿಸು ಎಂದು ಬೇಡುತ್ತ ಬಳೆ ತೊಟ್ಟುಕೊಳ್ಳುವುದು ಸಂಪ್ರದಾಯ. ಹೂವು, 5 ಬಗೆ ಹಣ್ಣಿನ ತಟ್ಟೆ ಜೋಡಿಸಿ, ದೀಪದ ಕಂಬಗಳಿಗೆ ತುಪ್ಪದ ಬತ್ತಿ ಅದ್ದಿ ಎಲ್ಲವನ್ನೂ ಹಿಂದಿನ ದಿನವೇ ಅಣಿ ಮಾಡಿಕೊಳ್ಳಬೇಕು. ಇಷ್ಟರ ಮಧ್ಯೆ ಬಿದಿಗೆ ಚಂದ್ರನ ದರ್ಶನದಿಂದ ಚೌತಿ ಚಂದ್ರನ ಶಾಪ ಪರಿಹಾರ ಅಂತ ನಂಬಿಕೆಯಿದೆ. ಬಿದಿಗೆಯಲ್ಲಿ ಚಂದ್ರ ಕಾಣುವುದೇ ಅಪರೂಪ, ಅರ್ಧ ಗಂಟೆ ಕಾಣಿಸಬಹುದು, ಮೋಡ ಇದ್ದರಂತೂ ಉಹೂ, ಇಲ್ಲವೇ ಇಲ್ಲ. ಚಿಕ್ಕ ಮಕ್ಕಳಿಗೆ “ಹೊರಗಡೆ ಹೋಗಿ ಚಂದ್ರ ಕಾಣಿಸ್ತಾನ ನೋಡು’ ಅಂತ ಹೇಳುವುದು, ಅವುಗಳ್ಳೋ ಹತ್ತು ಹತ್ತು ನಿಮಿಷಕ್ಕೂ “ಇಲ್ಲ, ಕಾಣಿಸ್ತಾ ಇಲ್ಲ’ ಅಂತ ದೊಡ್ಡ ಜವಾಬ್ದಾರಿಯುತ ಕೆಲಸ ಮಾಡುವವರ ಹಾಗೆ ಹೊರಗೂ, ಒಳಗೂ ಓಡಾಡೋದು.. ಇವೆಲ್ಲವನ್ನೂ ಈಗ ನೆನೆದರೆ ಅದೆಷ್ಟು ಖುಷಿಯಾಗುತ್ತೆ… ಈ ತಯಾರಿ ಎಲ್ಲ ನಡೆದ ನಂತರ ಅಮ್ಮ, “ಬೆಳಗ್ಗೆ 3 ಗಂಟೆಗೆ ಏಳ್ತೀನಿ, ಆಮೇಲೆ ನಿನ್ನನ್ನ 3.30ಕ್ಕೆ ಏಳಿಸ್ತೀನಿ. ಬೇಗ ಬೇಗ ರೆಡಿಯಾಗಬೇಕು. ನಿನ್ನ ಸ್ನಾನ ಮುಗಿದ ತಕ್ಷಣ ಇನ್ನೊಬ್ಬರನ್ನು 4 ಗಂಟೆಗೆ ಎಬ್ಬಿಸುವಾ…’ ಹೀಗೆ ಏನೇನೋ strategic plan ನಡೆಯುತ್ತೆ. ಆದರೆ ಆ ರಾತ್ರಿ ನಿದ್ದೆ ಮಾಡಿರೋರು ಯಾರು?
ಹಾಂ, ಮದುವೆಯ ನಂತರ, ಅಮ್ಮನ ಮನೆಯಲ್ಲಿ ನಾನು ಮಾಡಿದ ಮೊದಲ ಗೌರಿಪೂಜೆಯ ಬಗ್ಗೆ ಹೇಳಲೇ ಇಲ್ಲ ಅಂದಿರಾ? ಕೇಳಿ: ಬೆಳಗ್ಗೆ ಗಂಟೆ ನಾಲ್ಕು ಆಗ್ತಿದ್ದ ಹಾಗೆ ಎಲ್ಲರೂ ಎದ್ದು, ತಯಾರಾಗಿ, ಸಜ್ಜಾಗಿರುವ ಮಂಟಪದಲ್ಲಿ ದೇವಿಯನ್ನು ಕೂರಿಸಿ, ದೀಪ ಬೆಳಗಿ ಗಣೇಶನ ಪೂಜೆಯೊಂದಿಗೆ ಪುರೋಹಿತರ ಮಂತ್ರದಿಂದ ಆರಂಭವಾದ ಹಬ್ಬ, ಮುದ್ದು ಗೌರಿಗೆ ಪಂಚಾಮೃತ ಅಭಿಷೇಕ, ಪುಷ್ಪ ಪತ್ರೆಗಳಿಂದ ಷೋಡಶೋಪಚಾರ, 5 ಬಗೆಯ ಹಣ್ಣು, ತೆಂಗಿನಕಾಯಿ, ಹೋಳಿಗೆ, ಪಾಯಸ ಕೋಸಂಬರಿ ನೈವೇದ್ಯ… ನನಗೆ ಕೈಗೆ 8 ಗಂಟಿನ ದಾರದಿಂದ 16 ಗಂಟಿನ ದಾರಕ್ಕೆ ಪ್ರಮೋಷನ್, ಮೊರದ ಬಾಗಿನ ಬಂದ ಖುಷಿ… ಐದಾರು ಹೆಂಗಸರು ಸೇರಿ ಮಾಡಿದ ಪೂಜೆಯಲ್ಲಿ ಈ ಬಾಗಿನ ಮತ್ತು ಅರಿಶಿನ ಕುಂಕುಮ ಕೊಡುವುದೇ ಮುಕ್ಕಾಲು ಗಂಟೆಯ ಕಾರ್ಯಕ್ರಮ. ಎಲ್ಲವೂ ಚಂದ ಅನ್ನಿಸಿದ್ದಂತೂ ನಿಜ.
ಮದುವೆಗೆ ಮುಂಚೆ ಅಮ್ಮನ ಹಿಂದೆಯೋ, ಅಣ್ಣರೊಡನೆ ಹರಟೆಯಲ್ಲೋ ಅರ್ಧಂಬರ್ಧ ಪೂಜೆಯಲ್ಲಿ ಭಾಗವಹಿಸುತ್ತಿದ್ದ ನಾನು, ಮೊದಲ ಬಾರಿ ಗೃಹಿಣಿಯಾಗಿ ಪೂಜೆಯಲ್ಲಿ ಭಾಗವಹಿಸಿದ ಹೆಮ್ಮೆ. ಮದುವೆಗೆ ಮುಂಚೆ ಎಷ್ಟೋ ಬಾರಿ ಅಮ್ಮನೊಡನೆ ಪೂಜೆ ಮಾಡಲು ನನಗೂ ಬೆಳ್ಳಿಯ ಪಂಚಪಾತ್ರೆ ಉದ್ಧರಣೆ, ಅರಿಶಿನ ಕುಂಕುಮ ಎಲ್ಲ ಬೇಕು ಅಂತ ಹಠ ಮಾಡಿದ್ದುಂಟು. ಈಗ ಅವೆಲ್ಲವೂ ನನಗಿದೆ ಅನ್ನೋ ದೊಡ್ಡಸ್ತಿಕೆ ಬೇರೆ.
ಸಂಜೆಗೆ ಅಕ್ಕಪಕ್ಕದ ಮನೆಯವರನ್ನು ಕುಂಕುಮಕ್ಕೆ ಕರೆಯುವ, ಹೋಗುವ ಸಂಭ್ರಮ. ಮನ ಮಿಡಿಯುವ ಕ್ಷಣ ಅಂದರೆ, ಮನೆಯ ಹೆಣ್ಣುಮಕ್ಕಳಿಗೆ ಹೇಗೆ ಸೋಬಲಕ್ಕಿ ಇಟ್ಟು ಕಳುಹಿಸುತ್ತೇವೋ, ಹಾಗೆಯೇ ಗೌರಿಗೆ ಸೋಬಲಕ್ಕಿ ಕೊಡುವಾಗ, ತವರಿನಿಂದ ಹೊರಡುವ ಸಮಯ ಬಂದೇ ಬಿಟ್ಟಿತು ಅಂತ ಬಿಕ್ಕಿ ಬಿಕ್ಕಿ ಅಳು.
ಸಮಯ ಯಾರಿಗೂ ಕಾಯುವುದಿಲ್ಲ, ಅಳು, ಸಂತಸ, ಹಾಸ್ಯ, ನಗು ಎಲ್ಲದರೊಂದಿಗೆ ದಿನ ಕಳೆಯುತ್ತದೆ. ಮರುದಿನ ಗಣಪನೊಂದಿಗೆ ತಾಯಿ ಗೌರಿಯ ಪ್ರಯಾಣ. ಮನೆಯ ಹೆಣ್ಣು ಮಗಳು ಗಂಡನೊಂದಿಗೆ ಅವಳ ಮನೆಗೆ ಪ್ರಯಾಣ..
ಪೂರ್ಣಿಮಾ ಗಿರೀಶ್