Advertisement

ಗೌಡರ ಆಡಳಿತ ಜಿಲ್ಲೆಗೆ ಇನ್ನು ನೆನಪು

10:22 AM May 23, 2019 | Team Udayavani |

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಡಳಿತ ಹಾಸನ ಜಿಲ್ಲೆಗೆ ಇನ್ನು ನೆನಪು ಮಾತ್ರ. ಅವರು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಹೊಸ ಪ್ರತಿನಿಧಿ ಗುರುವಾರ ಘೋಷಣೆಯಾಗಲಿದೆ. 5 ಬಾರಿ ಹಾಸನ ಲೊಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದೇವೇಗೌಡರು ತಮ್ಮ ತವರು ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಹೋಗಿದ್ದಾರೆ.

Advertisement

1962ರಲ್ಲಿ ಹೊಳೆನರಸೀಪುರ ವಿಧಾನಸಭಾಕ್ಷೇತ್ರದ ಸದಸ್ಯರಾಗಿ ರಾಜಕೀಯ ಆರಂಭಿಸಿದ ದೇವೇಗೌಡರು ಸತತ 6 ಬಾರಿ ಹೊಳೆನರಸೀ ಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಲೇ ವಿರೋಧ ಪಕ್ಷದ ನಾಯಕನಾಗಿ, ನೀರಾವರಿ ಮತ್ತು ಲೋಕೋಪ ಯೋಗಿ ಇಲಾಖೆ ಸಚಿವನಾಗಿ ರಾಜ್ಯ ರಾಜಕಾರಣದಲ್ಲಿ ಬೆಳೆಯುತ್ತಾ ಬಂದು ಮುಖ್ಯಮಂತ್ರಿಯೂ ಆದರು.

1994ರಲ್ಲಿ ಸಿಎಂ ಆದ ಗೌಡರು: 1989ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀ ಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಂತರ 1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಅಂದಿನ ಪ್ರಭಾವಿ ರಾಜಕಾರಣಿ ಎಚ್.ಸಿ. ಶ್ರೀಕಂಠಯ್ಯ ಅವರನ್ನು ಪರಾಭವಗೊಳಿಸಿ ಸಂಸತ್‌ ಪ್ರವೇಶಿಸಿದ ದೇವೇಗೌಡರು, 1994ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿಯೂ ಆದರು.

ರಾಜಕೀಯ ಭವಿಷ್ಯದ ಪರೀಕ್ಷೆ: 1991, 1998, 2004, 2009, 2014 ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಆಯ್ಕೆ ಯಾಗಿದ್ದ ದೇವೇಗೌಡರು ಅತಿ ಹೆಚ್ಚುಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಯಾದ ಪ್ರತಿನಿಧಿ ಹಾಗೂ ಹ್ಯಾಟ್ರಿಕ್‌ ಗೆಲುವಿನ ದಾಖಲೆ ಮಾಡಿದ ಪ್ರತಿನಿಧಿಯೂ ಹೌದು. ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಬಹುಮತದಿಂದ ಗೆಲ್ಲುವ ಅವಕಾಶವಿದ್ದರೂ ತಮ್ಮ ಮೊಮ್ಮಗನಿಗೆ ಕ್ಷೇತ್ರವನ್ನು ಧಾರೆ ಎರೆದು ತುಮಕೂರು ಕ್ಷೇತ್ರಕ್ಕೆ ಹೋಗಿ ರಾಜಕೀಯ ಭವಿಷ್ಯದ ಪರೀಕ್ಷೆ ಎದುರಿಸಿದ್ದಾರೆ.

ರಾಜಕೀಯ ಸಭೆಯಲ್ಲಷ್ಟೇ ಗೌಡರ ದರ್ಶನ: ಸಚಿವನಾಗಿ, ಮುಖ್ಯಮಂತ್ರಿಯಾಗಿ, ಸಂಸದ ನಾಗಿ, ಪ್ರಧಾನ ಮಂತ್ರಿಯಾಗಿ ಹಾಸನ ಜಿಲ್ಲೆ ಯಲ್ಲಿ ಆಡಳಿತ ನಡೆಸಿದ್ದ ದೇವೇಗೌಡರು ಇನ್ನು ಹಾಸನ ಜಿಲ್ಲೆಯ ಯಾವುದೇ ಸರ್ಕಾರಿ ಸಭೆಗಳಲ್ಲೂ ಅಧಿಕೃತವಾಗಿ ಪಾಲ್ಗೊಳ್ಳು ವಂತಿಲ್ಲ. ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದ ಅವರ ಮುತ್ಸದ್ಧಿನ, ಮೌನದ ನೋಟ ಮತ್ತು ಮೆದು ಮಾತುಗಳ ಚಾಟಿ ಎಲ್ಲವೂ ಇನ್ನು ನೆನಪು ಮಾತ್ರ. ಜೆಡಿಎಸ್‌ನ ಸಭೆಗಳು ಹಾಗೂ ರಾಜಕೀಯ ಸಭೆಗಳಲ್ಲಷ್ಟೇ ಇನ್ನು ದೇವೇಗೌಡರನ್ನು ಜಿಲ್ಲೆಯ ಜನರು ಕಾಣಲು ಸಾಧ್ಯ.

Advertisement

ಹಾಸನ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪೋತ್ಸಾಹ ನೀಡುವ ಮೆಗಾಡೇರಿ, ಮಾದರಿ ಬಸ್‌ ನಿಲ್ದಾಣ ಸೇರಿದಂತೆ ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಎಲ್ಲಾ ಅಭಿವೃದ್ಧಿಯಲ್ಲೂ ಅವರ ಶ್ರೀ ರಕ್ಷೆ ಇದೇ ಇತ್ತು. ಮುಂದೆಯೂ ಇರಲಿ ಎಂಬುದು ಜಿಲ್ಲೆಯ ಜನರ ಆಶಯ.

1962ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ರಾಜಕೀಯ ಆರಂಭಿಸಿದ ದೇವೇಗೌಡರು

ಸತತ 6 ಬಾರಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ರಾಜಕರಣದಲ್ಲಿ ಬೆಳೆದ ಗೌಡರು.

ಈಡೇರದ ಬಯಕೆ: ಹಾಸನದಲ್ಲಿ ಐಐಟಿ ಸ್ಥಾಪನೆಗೆ ದೇವೇಗೌಡರು ಒಂದು ದಶಕ ದಿಂದಲೂ ಹೋರಾಟ ನಡೆಸಿದರು. ಅದಕ್ಕಾಗಿ 1000 ಎಕರೆ ಭೂಮಿ ಕಾಯ್ದಿರಿಸಿದರೂ ಜಿಲ್ಲೆಗೆ ಐಐಟಿ ಮಂಜೂರಾಗಲಿಲ್ಲ. ಹಾಸನ ವಿಮಾನ ನಿಲ್ದಾಣ ನಿರ್ಮಾಣ, ಕೇಂದ್ರೀಯ ವಿಶ್ವವಿದ್ಯಾ ನಿಲಯವನ್ನು ಹಾಸನದಲ್ಲಿ ಪ್ರಾರಂಭಿಸುವ ದೇವೇಗೌಡರ ಬಯಕೆ ಮಾತ್ರ ಈಡೇರಲೇ ಇಲ್ಲ. ಆದರೆ ರೇವಣ್ಣ ಅವರು ದೇವೇಗೌಡರನ್ನು ಮುಂದೆಯೂ ಬಳಸಿಕೊಂಡು ಈ ಯೋಜನೆಗಳನ್ನು ಜಿಲ್ಲೆಗೆ ತರುವರೆಂಬ ಆಸೆಯನ್ನು ಜಿಲ್ಲೆಯ ಜನರು ಬಿಡುವುದಿಲ್ಲ.

● ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next