ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ದೇವೇಗೌಡರ ಕುಟುಂಬ ರಾಜಕಾರಣ ಪ್ರಮುಖ ರಾಜಕೀಯ ವಿಷಯವಾಗಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ದೇವೇಗೌಡರ ರಾಜಕೀಯ ವೃಕ್ಷ, ವೋಟ್ ಫಾರ್ ಫ್ಯಾಮಿಲಿ ಸೇರಿದಂತೆ ಹಲವು ರೀತಿಯ ವ್ಯಂಗ್ಯ ಚಿತ್ರಗಳು ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
ಗೌಡರ ಕುಟುಂಬದ ಅಧಿಕಾರ ವ್ಯಾಮೋಹ ಬಿಂಬಿಸುವಂತಹ ಚಿತ್ರಾವಳಿಗಳು ಮನರಂಜನೆ ನೀಡುತ್ತಿವೆ. ಚುನಾವಣೆ ಸಮಯದಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ವಿಷಯವನ್ನು ರಾಜಕೀಯವಾಗಿ ಎದುರಿಸುವುದು ಪಕ್ಷದ ಸ್ಥಳೀಯ ನಾಯಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಲೋಕಸಭಾ ಸದಸ್ಯ ಸ್ಥಾನದಲ್ಲಿ ದೇವೇಗೌಡರು, ಸಿಎಂ ಹುದ್ದೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಸ್ಥಾನದಲ್ಲಿ ಎಚ್.ಡಿ.ರೇವಣ್ಣ, ಅನಿತಾ ಶಾಸಕಿಯಾಗಿಯೂ ಹಾಗೂ ಭವಾನಿ ಜಿಪಂ ಸದಸ್ಯರಾಗಿರುವ ಸಂದರ್ಭದಲ್ಲೇ ಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖೀಲ್ ಒಟ್ಟಿಗೆ ರಾಜಕೀಯ ಪ್ರವೇಶ ಪಡೆಯುತ್ತಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಕಣ್ಣನ್ನು ಕೆಂಪಗಾಗಿಸಿದೆ. ಅಲ್ಲದೆ, ಜೆಡಿಎಸ್ ಪಕ್ಷದ ಆಂತರಿಕ ವಲಯದಲ್ಲೇ ಮೊಮ್ಮಕ್ಕಳ ಸ್ಪರ್ಧೆಗೆ ಅತೃಪ್ತಿ, ಅಸಮಾಧಾನ ವ್ಯಕ್ತವಾಗಿದೆ.
ವ್ಯಂಗ್ಯಭರಿತ ಮಾತು: ದೇವೇಗೌಡರು ರಾಷ್ಟ್ರಪತಿ, ಕುಮಾರಸ್ವಾಮಿ ಪ್ರಧಾನಿ, ರೇವಣ್ಣ ಕೇಂದ್ರ ಗೃಹಮಂತ್ರಿ, ನಿಖೀಲ್ ಮುಖ್ಯಮಂತ್ರಿ, ಪ್ರಜ್ವಲ್ ಉಪ ಮುಖ್ಯಮಂತ್ರಿ, ಸೂರಜ್ ರಾಜ್ಯ ಗೃಹಮಂತ್ರಿ, ಅನಿತಾ ಕುಮಾರಸ್ವಾಮಿ ಉಪಪ್ರಧಾನಿ ದೇವೇಗೌಡರ ಮಗಳ ಮಕ್ಕಳು ಮಂತ್ರಿಯಾಗುವವರೆಗೂ ಜೆಡಿಎಸ್ ಕಾರ್ಯಕರ್ತರೇ ಏಳಿ ಎದ್ದೇಳಿ ನಿದ್ದೆ ಬಿಟ್ಟು ಕೈಯ್ಯಲ್ಲಿರುವ ಅಲ್ಪಸ್ವಲ್ಪ ಹಣವನ್ನು ಖಾಲಿ ಮಾಡಿ ಮನೆಯವರನ್ನು ಉಪವಾಸ ಕೆಡವಿ ಗೌಡರ ಕುಟುಂಬದ ರಾಜಕೀಯ ಏಳ್ಗೆಗೆ ಹೋರಾಡೋಣ ಎಂದೆಲ್ಲಾ ವಿಶ್ಲೇಷಣೆಯ ಕುಹಕವಾಡುತ್ತಾ ವ್ಯಂಗ್ಯಭರಿತ ಮಾತುಗಳಿಂದ ಚುಚ್ಚಿದ್ದಾರೆ.
ವೃಕ್ಷ ಚೆನ್ನಾಗಿ ಬೆಳೆಸಿ: ಜೆಡಿಎಸ್ ಪಕ್ಷದೊಳಗೆ ಅಥವಾ ಸಮ್ಮಿಶ್ರ ಸರ್ಕಾರದಲ್ಲಿ ವೃಕ್ಷದೊಳಗೆ ಮೂರ್‍ನಾಲ್ಕು ಸ್ಥಾನ ಖಾಲಿ ಇದೆ. ನನಗೆ ಸಿಕ್ಕರೂ ಸಿಗಬಹುದು ಎಂದು ಕನಸು ಕಾಣಬೇಡ. ಅದು ನನ್ನ ಮೊಮ್ಮಕ್ಕಳ ಹೆಂಡತಿ, ಮಕ್ಕಳಿಗೆ ಮೀಸಲಿಟ್ಟಿದ್ದೇವೆ. ನೀವು ವೃಕ್ಷಕ್ಕೆ ಚೆನ್ನಾಗಿ ನೀರೆರೆದು ಬೆಳೆಸಿ ಎಂಬ ವ್ಯಂಗ್ಯ ಚಿತ್ರಗಳು ಟ್ರೋಲ್ ಆಗಿ ಎಲ್ಲೆಡೆ ಹರಿದಾಡುತ್ತಿವೆ.
ಸಾರ್ವಜನಿಕ ವಲಯದಲ್ಲೂ ಕುಟುಂಬ ರಾಜಕಾರಣದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿಂದಿನ ಯಾವುದೇ ಚುನಾವಣೆ ಸಂದರ್ಭದಲ್ಲೂ ಗೌಡರ ಕುಟುಂಬದ ರಾಜಕೀಯ ವಿಷಯವಾಗಿ ಈ ಮಟ್ಟಿನ ಚರ್ಚೆಗಳು ನಡೆದಿರಲಿಲ್ಲ. ಆದರೆ, ಈಗ ಗೌಡರ ಕುಟುಂಬ ರಾಜಕಾರಣವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಜೆಡಿಎಸ್ ಅನ್ನು ಮಂಡ್ಯ ಕ್ಷೇತ್ರದಲ್ಲಿ ನೆಲಕಚ್ಚುವಂತೆ ಮಾಡಲು ವಿರೋಧಿ ಗುಂಪಿನವರು ಪೂರ್ವ ತಯಾರಿ ಆರಂಭಿಸಿದಂತೆ ಕಂಡುಬರುತ್ತಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ಹಾಗೂ ಮಂಡ್ಯದಲ್ಲಿ ನಿಖೀಲ್ ಯಾವ ಕಾರಣಕ್ಕೂ ಲೋಕಸಭೆ ಪ್ರವೇಶಿಸದಂತೆ ತಡೆಯಲು ಮೈತ್ರಿ ವಿರೋಧಿ ಗುಂಪಿನ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿಯವರು ಆರಂಭದಲ್ಲೇ ಜೆಡಿಎಸ್‌ಗೆ ಕಡಿವಾಣ ಹಾಕಲು ನಿರ್ಧರಿಸಿ ಸಾಮಾಜಿಕ ಜಾಲ ತಾಣಗಳನ್ನು ಕುಟುಂಬ ರಾಜಕಾರಣದ ಟ್ರೋಲ್‌ಗಳನ್ನು ಹರಿಯಬಿಟ್ಟು ಜನಮಾನಸದಲ್ಲಿ ಜೆಡಿಎಸ್ ವಿರೋಧಿ ಭಾವನೆ ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.