Advertisement
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ| ಅಪ್ಪಾಜಿ ಗೌಡ ಅವರು ಸೋಮವಾರ ಮಧ್ಯಾಹ್ನ ಮಹಿಳಾ ಕಾಲೇಜು ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೆ ಭೇಟಿ ನೀಡಿದ ಸಂದರ್ಭ, ಅಲ್ಲಿ ಅದಾಗಲೆ ನೆರೆದಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಪದಾಧಿಕಾರಿಗಳು ಸೂಚಿತ ಸ್ಥಳದಲ್ಲಿ ಕಾಲೇಜು ನಿರ್ಮಾಣವಾದರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.
ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮತ್ತು ಪದಾಧಿಕಾರಿಗಳು ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ, ಮಹಿಳಾ ಕಾಲೇಜಿಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಗೌಡ ಸಮಾಜವಿದ್ದು, ವರ್ಷಪೂರ್ತಿ ವಿವಾಹ ಸೇರಿದಂತೆ ವಿವಿಧ ಸಮಾರಂಭಗಳು ನಡೆಯುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲಿದೆ, ಮಹಿಳಾ ಕಾಲೇಜಿಗೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ನಮ್ಮ ಆಕ್ಷೇಪವೆಂದು ಸ್ಪಷ್ಟಪಡಿಸಿದರು.
Related Articles
Advertisement
ನಗರದ ಐಟಿಐ ಕಾಲೇಜು ಸಾಕಷ್ಟು ಜಾಗವನ್ನು ಹೊಂದಿದ್ದು, ಅಲ್ಲಿಯೂ ಮಹಿಳಾ ಕಾಲೇಜು ನಿರ್ಮಾಣ ಮಾಡಬಹುದಾಗಿದೆ, ಇಲ್ಲವೆ ಪ್ರಸ್ತುತ ಜಿ.ಪಂ, ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಮಾಡಿರುವ ಪ್ರದೇಶದಲ್ಲು ಮಹಿಳಾ ಕಾಲೇಜು ನಿರ್ಮಾಣಕ್ಕೆ ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.
ಒಕ್ಕೂಟದ ಆಕ್ಷೇಪಗಳನ್ನು ಆಲಿಸಿದ ಜಂಟಿ ನಿರ್ದೇಶಕರು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ಅವರೊಂದಿಗೆ ಕಾಲೆೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಶ್ರೀನಿವಾಸಯ್ಯ, ಹಿರಿಯ ವ್ಯವಸ್ಥಾಪಕ ಸುಮುಖ್ ಆರ್ಯ, ಮಹಿಳಾ ಕಾಲೆೇಜು ಪ್ರಾಂಶುಪಾಲ ಜವರಪ್ಪ ಅವರು ಹಾಜರಿದ್ದರು.
ಮಡಿಕೇರಿಯ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ನಗರಸಭಾ ಮಾಜಿ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿದರು.
ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ಸಿ. ವಿಶ್ವನಾಥ್, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಹಾಗೂ ಪ್ರಮುಖರಾದ ಕೆ.ಡಿ. ದಯಾನಂದ, ಪೊನ್ನಚ್ಚನ ಮಧು, ದಂಬೆಕೋಡಿ ಹರೀಶ್, ಬೈತಡ್ಕ ಜಾನಕಿ, ಕೊಡಗು ಗೌಡ ಯುವ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಗೌಡ ಸಮಾಜದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.