ಬೆಂಗಳೂರು: ಲೋಕಸಭೆ ಚುನಾವಣೆ ಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿ ಸುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳು ಗೆಲುವಿಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಕ್ಷೇತ್ರದ ಶಾಸಕರು ಸಭೆ ನಡೆಸಿದರು.
ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಶಾಸಕ ಗೋಪಾಲಯ್ಯ, ದಾಸರಹಳ್ಳಿ ಮಂಜುನಾಥ, ಕಾಂಗ್ರೆಸ್ ಶಾಸಕರಾದ ಯಶವಂತಪುರ ಕ್ಷೇತ್ರದ ಎಸ್.ಟಿ. ಸೋಮಶೇಖರ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಪುಲಿಕೇಶಿನಗರದ ಅಖಂಡ ಶ್ರೀನಿವಾಸ್, ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ದೇವೇಗೌಡರಿಗೆ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲು ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಶಾಸಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ದೇವೇಗೌಡರ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಮೈತ್ರಿ ಪಕ್ಷಗಳಿಗೆ ಕಷ್ಟವಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯ ನಂತರ ಮಾತನಾಡಿದ ಕೃಷ್ಣಬೈರೇಗೌಡ, ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ. ಬೆಂ.ಉತ್ತರ ದಲ್ಲಿ ದೇವೇಗೌಡರ ಸ್ಪರ್ಧೆ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡಬೇಕಿದೆ. ದೇವೇಗೌಡರು ಸ್ಪರ್ಧಿಸಿದರೆ, ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
19ಕ್ಕೆ ಕಾಂಗ್ರೆಸ್ ಸಭೆ
ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ 19ಕ್ಕೆ ದೆಹಲಿಯಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಕೆಲವು ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.