ಬೆಂಗಳೂರು: ತುಮಕೂರು ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡ ಅವರ ನಾಮಪತ್ರ ವಾಪಸ್ ಪಡೆಯುವಂತೆ ಮಾಡಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದರೂ, ಸಂಬಂಧಿಕರ ನಿಧನದ ಹಿನ್ನೆಲೆಯಲ್ಲಿ ಗೈರಾಗಿ ದೂರ ಉಳಿದಿದ್ದ ಮುದ್ದಹನುಮೇಗೌಡರಿಗೆ ಬುಧವಾರ ಕಚೇರಿಗೆ ಆಗಮಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು.
ಮುದ್ದಹನುಮೇಗೌಡರು ಕೆಪಿಸಿಸಿ ಕಚೇರಿಗೆ ಆಗಮಿಸುತ್ತಾರೆ ಎಂದು ಹೇಳಲಾಗಿತ್ತಾದರೂ, ಸಂಜೆವರೆಗೂ ಆಗಮಿಸದ ಹಿನ್ನೆಲೆಯಲ್ಲಿ, ದಿನೇಶ್ ಗುಂಡೂರಾವ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ನಾಮಪತ್ರ ಹಿಂಪಡೆಯುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿಲ್ಲ ಎಂದು ತಿಳಿದು ಬಂದಿದೆ.
ಕಾರಣ ನೀಡಲಿ: ದೇಶದಲ್ಲಿ ಕಾಂಗ್ರೆಸ್‌ನ ಯಾವ ಸಂಸದರಿಗೂ ಈ ಪರಿಸ್ಥಿತಿ ಬಂದಿಲ್ಲ. ಆದರೆ, ನನಗೆ ಹೀಗೆ ಆಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ಕಾರಣ ನೀಡದೇ ನನಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ನನ್ನನ್ನು ಯಾಕೆ ಕೈ ಬಿಟ್ಟಿದ್ದಾರೆ ಎಂದು ಮೊದಲು ಕಾರಣ ನೀಡಲಿ ಎಂದು ಮುದ್ದಹನುಮೇಗೌಡ ಆಗ್ರಹಿಸಿದರು.
ಪಕ್ಷದಲ್ಲಿನ ಎಲ್ಲ ಸಮಸ್ಯೆಗಳು ಬಗೆ ಹರಿಯುತ್ತವೆ. ಕೆ.ಎನ್. ರಾಜಣ್ಣ ಅವರು
ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುದ್ದ ಹನುಮೇಗೌಡರ ಜೊತೆಯೂ ಮಾತುಕತೆ ನಡೆಸಿದ್ದೇನೆ. ಯಾವುದೇ ಸಮಸ್ಯೆ ಆಗುವುದಿಲ್ಲ.ಎಲ್ಲವೂ ಬಗೆ ಹರಿಯಲಿದೆ.
ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ನಾಮಪತ್ರ ವಾಪಸ್ ಪಡೆಯಲು ಇನ್ನೂ ಅವಕಾಶವಿದೆ. ದೇವೇಗೌಡರು ದೊಡ್ಡ ಮನಸು ಮಾಡಿ ಕ್ಷೇತ್ರ ಬಿಟ್ಟುಕೊಡಲಿ. ಪಕ್ಷದ ನಾಯಕರು ಹೇಳಿದಾಕ್ಷಣ ನಾಮಪತ್ರ ಹಿಂಪಡೆಯುವುದಿಲ್ಲ. ಪಕ್ಷದ ನಾಯಕರು ಭೇಟಿ ಮಾಡಲು ಹೇಳಿದ್ದಾರೆ. ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ.
ಮುದ್ದಹನುಮೇಗೌಡ, ತುಮಕೂರು ಪಕ್ಷೇತರ ಅಭ್ಯರ್ಥಿ