ತೆಲಸಂಗ: ಸರ್ಕಾರಿ ಶಾಲೆಗಳು ಮತ್ತು ಅಲ್ಲಿನ ಬಿಸಿಯೂಟವೆಂದರೆ ಮೂಗು ಮುರಿಯುವ ದಿನ ಇದು. ಅಂತಹದರಲ್ಲಿ ಇಲ್ಲಿಯ ಎರಡು ಶಾಲೆಯ ಶಿಕ್ಷಕರು ರುಚಿಕಟ್ಟಾದ ಬಿಸಿಯೂಟ ಮಾಡಿ ಬಡಿಸುವುದರಲ್ಲಿ ಮಾದರಿ ಕೆಲಸ ಮಾಡಿದ್ದಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳ ಹಾಜರಾತಿ ಹೆಚ್ಚಿಸುವಲ್ಲಿ ಸಫಲರಾಗಿದ್ದಾರೆ.
ಮೃಷ್ಟಾನ್ನ ಭೋಜನ ಮಾಡಿ ಮಕ್ಕಳಿಗೆ ಉಣಬಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಾಡಗಿ ಗ್ರಾಮದ
ಮುಧೋಳ ತೋಟದ ವಸತಿ ಸರ್ಕಾರಿಪ್ರಾಥಮಿಕ ಕನ್ನಡ ಶಾಲೆ ಮತ್ತು ಅರಟಾಳ ಗ್ರಾಮದ ಮಾಳಿಂಗರಾಯನ ತೋಟದ ವಸತಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು ಪಾಲಕರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಕಾನ್ವೆಂಟ್‌ಗಳಿಗೆ ಸಡ್ಡು ಹೊಡೆಯುವಂತೆ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಮಕ್ಕಳಿಗೆ ಕೊಡುವ ಧಾನ್ಯ-ಸಾಮಗ್ರಿಗಳಲ್ಲಿಯೇ ವಿಭಿನ್ನ ಊಟ ತಯಾರಿಸಿ ನೀಡಬಹುದು ಎಂಬುದಕ್ಕೆ ಶಾಲೆಗಳುನಿದರ್ಶನವಾಗಿವೆ. ವಾರದಲ್ಲಿ ಒಂದೊಂದು ದಿನ ಇಡ್ಲಿ, ಬಜಿ, ಜಾಮೂನ್, ದೋಸೆ ಹೀಗೆ ವಿಶಿಷ್ಟ ಅಡುಗೆ ಮಾಡುತ್ತಿದ್ದು, ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಶಾಲೆಯಲ್ಲಿ ಓದುವ ಯಾವುದೇ ಮಗುವಿನ ಜನ್ಮದಿನ ಇದ್ದರೆ ಬಿಸಿಯೂಟದಲ್ಲಿ ವಿಶೇಷ ಖಾದ್ಯ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡುತ್ತಾರೆ.
ಇಲ್ಲಿಯ ರೈತ, ಕೂಲಿಕಾರ್ಮಿಕರ ಮಕ್ಕಳಿಗೆ ಅಕ್ಷರ ದಾಸೋಹದೊಂದಿಗೆ ಅನ್ನ ದಾಸೋಹವನ್ನು ಶಿಕ್ಷಕರು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದು, ಕನ್ನಡಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಸಮಯಪಾಲನೆ, ಮೈದಾನ ನಿರ್ಮಾಣ, ಸ್ವತ್ಛ ಶೌಚಾಲಯ, ಗುಣಮಟ್ಟದ ಶಿಕ್ಷಣ, ಗಣಕಯಂತ್ರದ ಶಿಕ್ಷಣ ಹೀಗೆ ವಿಭಿನ್ನ ಪ್ರಯೋಗವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಮಕ್ಕಳ ಹಾಜರಾತಿಗೆ ಕಾರಣವಾಗಿದೆ ಎನ್ನುತ್ತಾರೆ ಇಲ್ಲಿಯ ಶಿಕ್ಷಕರು.
ನಮ್ಮಿಂದ ಅನ್ನದಾನ ಮಾಡಲಾಗದಿದ್ದರೂ ಸರ್ಕಾರ ಕೊಡುವುದನ್ನಾದರೂ ಪ್ರಾಮಾಣಿಕವಾಗಿ ಮಾಡುವ ಮೂಲಕ ಆತ್ಮಸಾಕ್ಷಿ ಮೆಚ್ಚುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ನಮ್ಮ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದ್ದು, ವಿಭಿನ್ನ ಪ್ರಯೋಗಗಳನ್ನು ಮಾಡಿ ಕನ್ನಡ ಶಾಲೆಗಳ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. –
ಯಾಸೀನ ಕರಜಗಿ, ಶಿಕ್ಷಕ, ಅರಟಾಳ
ವಿಶಿಷ್ಟ ಬಿಸಿಯೂಟ ತಯಾರಿಕೆಗೆ ಹೆಚ್ಚಿಗೆ ಹಣ ಬೇಕಿಲ್ಲ. ಸರ್ಕಾರ ಕೊಡುವ ಹಣವೇ ಸಾಕಾಗುತ್ತದೆ. ಮಾಡುವ ಇಚ್ಛಾಶಕ್ತಿ ಇದ್ದರೆ ಇದೆಲ್ಲ ಸುಲಭ ಸಾಧ್ಯ. ನಾವೇನು ಮನೆಯಿಂದ ತಂದು ಮಾಡುವುದಿಲ್ಲ. ಸರ್ಕಾರ ಕೊಡುತ್ತದೆ, ನಾವು ವ್ಯವಸ್ಥಿತವಾಗಿ ಮಾಡಿ ಬಡಿಸುತ್ತೇವೆ.
– ಸುರೇಶ ಕುಂಬಾರ, ಶಿಕ್ಷಕ, ಬಾಡಗಿ