Advertisement

ಎಲ್ಲವನ್ನೂ ಒಳಗೊಂಡ “ಒಂದೇ ಡಿಜಿಟಲ್‌ ಐಡಿ’!

10:03 PM Jan 30, 2022 | Team Udayavani |

ನವದೆಹಲಿ: ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ಪ್ಯಾನ್‌ ಕಾರ್ಡ್‌, ಚಾಲನಾ ಪರವಾನಗಿ ಸೇರಿದಂತೆ ಎಲ್ಲ ಡಿಜಿಟಲ್‌ ಐಡಿಗಳೂ ಒಂದಕ್ಕೊಂದು ಲಿಂಕ್‌ ಆದರೆ ಹೇಗಿರುತ್ತದೆ?

Advertisement

ದೇಶವಾಸಿಗಳ ಎಲ್ಲ ಗುರುತಿನ ಚೀಟಿಗಳನ್ನೂ ಲಿಂಕ್‌ ಮಾಡಿ “ಒಂದು ಡಿಜಿಟಲ್‌ ಐಡಿ’ ಕೊಡುವಂಥ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಅದಕ್ಕಾಗಿ “ಫೆಡರೇಟೆಡ್‌ ಡಿಜಿಟಲ್‌ ಐಡೆಂಟಿಟೀಸ್‌’ ಎಂಬ ಹೊಸ ಮಾಡೆಲ್‌ ಅನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

ಒಂದು ರೀತಿಯಲ್ಲಿ ಇದು “ಆಧಾರ್‌’ ಕಾರ್ಡ್‌ನ “ಉತ್ತರಾಧಿಕಾರಿ’ ಇದ್ದಂತೆ. ಏಕೆಂದರೆ, ಆಧಾರ್‌ ಕಾರ್ಡ್‌ ಸಂಖ್ಯೆಯಂತೆಯೇ ಇಲ್ಲೂ ವಿಶಿಷ್ಟ ಐಡಿಯೊಂದನ್ನು ನೀಡಲಾಗುತ್ತದೆ.

ಒಂದಕ್ಕೊಂದು ಲಿಂಕ್‌ ಆಗಿರುವ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಹೊಸ ಡಿಜಿಟಲ್‌ ಸಂರಚನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಪ್ರಸ್ತಾವನೆ ಹೊಂದಿದೆ. ಒಂದೇ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಮೂಲಕ ಇಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಕೂಡ ಸರ್ಕಾರದ ಉದ್ದೇಶವಾಗಿದೆ ಎಂದು ಎಂದು “ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಇದನ್ನೂ ಓದಿ:ಮತ್ತೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಪೆಗಾಸಸ್‌ ಗೂಢಚರ್ಯೆ ವಿವಾದ

Advertisement

ಸಾರ್ವಜನಿಕ ಪ್ರತಿಕ್ರಿಯೆಗೆ ಲಭ್ಯ?:
ಈ ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಸದ್ಯದಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇದನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಬಹಿರಂಗಪಡಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಸಾರ್ವಜನಿಕರಿಂದ ಫೆ.27ರೊಳಗಾಗಿ ಪ್ರತಿಕ್ರಿಯೆಗಳನ್ನು ಆಹ್ವಾನಿಸಬಹುದು ಎಂದು ಹೇಳಲಾಗಿದೆ.

ಏನಿದು ಡಿಜಿಟಲ್‌ ಐಡಿ?
ನಿಮ್ಮ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ಪ್ಯಾನ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಎಲ್ಲ ವಿಧದ ಗುರುತಿನ ಚೀಟಿಗಳನ್ನು ಸಂಗ್ರಹಿಸಿಡುವ ವ್ಯವಸ್ಥೆಯಿದು. ಅದರಂತೆ, ಈ ಎಲ್ಲ ಐಡಿಗಳನ್ನೂ ಒಂದೇ “ಡಿಜಿಟಲ್‌ ಗುರುತಿನ ಚೀಟಿ’ಯೊಂದಿಗೆ ಲಿಂಕ್‌ ಮಾಡಲಾಗುತ್ತದೆ. ನೀವು ವಿವಿಧ ರೀತಿಯ ಸೇವೆಗಳನ್ನು ಪಡೆಯಲು ಇದೇ ಡಿಜಿಟಲ್‌ ಐಡಿಯನ್ನು ಬಳಸಬಹುದು. ಇದರಿಂದಾಗಿ, ಪದೇ ಪದೆ ದೃಢೀಕರಣ ಪ್ರಕ್ರಿಯೆಗೆ ಒಳಗಾಗುವುದು ತಪ್ಪುತ್ತದೆ.

ಅನುಕೂಲತೆಯೇನು?
– ಕೇಂದ್ರ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಗುರುತಿನ ದತ್ತಾಂಶಗಳನ್ನು ಒಂದೇ ಕಡೆ ಸಂಗ್ರಹಿಸಿಟ್ಟಂತಾಗುತ್ತದೆ.
– ಕೆವೈಸಿ (ನೋ ಯುವರ್‌ ಕಸ್ಟಮರ್‌) ಅಥವಾ ಇ-ಕೆವೈಸಿ ಪ್ರಕ್ರಿಯೆಗೆ ಈ ಡಿಜಿಟಲ್‌ ಐಡಿಯನ್ನೇ ಬಳಸಬಹುದು.
– ಪ್ರತಿ ಸೇವೆ ಪಡೆಯುವಾಗಲೂ ಪದೇ ಪದೆ ದೃಢೀಕರಣ ಪ್ರಕ್ರಿಯೆಗೆ ಒಳಗಾಗುವುದನ್ನು ಇದರಿಂದ ತಪ್ಪಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next