ಶಿವಮೊಗ್ಗ: ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಅನುದಾನಕ್ಕೆ ಕಾಯದೆ ರಾಜ್ಯ ಸರಕಾರ ಪರಿಹಾರ ನೀಡಿತ್ತು. ರೈತರಿಗೆ ಪರಿಹಾರ ಕೊಡಲು ಸಹ ಕಾಂಗ್ರೆಸ್ ಸರಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಬರ ಪರಿಹಾರ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ. ಸರಕಾರಿ ನೌಕರರಿಗೆ ಸಂಬಳ ಕೊಡಲು ಸಹ ಖಜಾನೆಯಲ್ಲಿ ಹಣ ಇಲ್ಲ. ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಬರದ ವಿಚಾರದಲ್ಲಿ ಏಕೆ ಮುಖ್ಯಮಂತ್ರಿಗಳು ಮೀನಾಮೇಷ ಮಾಡುತ್ತಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ರೈತರ ಬಗ್ಗೆ ಅಸಡ್ಡೆ ಇದೆ. ಅಲ್ಪಸಂಖ್ಯಾಕರ ಅಭಿವೃದ್ಧಿ ತೋರುವ ಉತ್ಸಾಹ ಸಂಕಷ್ಟದಲ್ಲಿರುವ ರೈತರಿಗೂ ತೋರಿಸಬಹುದಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರಕಾರ ಇದ್ದಾಗ ಹೆಕ್ಟೇರ್‌ಗೆ 24 ಸಾವಿರ ಪರಿಹಾರ ಕೊಟ್ಟಿದ್ದರು. ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರದ ಅನುದಾನ ಕಾಯದೆ ಪರಿಹಾರ ನೀಡಬೇಕು. ನಿಮ್ಮ ಜವಾಬ್ದಾರಿಯಿಂದ ಏಕೆ ನುಣುಚಿಕೊಳ್ಳುತ್ತಿದ್ದೀರಾ ಎನ್ನುವುದು ನಮ್ಮ ಪ್ರಶ್ನೆ ಎಂದರು.
ನೇಹಾ ಹತ್ಯೆ ಪ್ರಕರಣದಲ್ಲಿ ಸಿಎಂ, ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಫೋಟೋ ವೈರಲ್ ಮಾಡುವ ಮೂಲಕ ನೇಹಾ ಕುಟುಂಬ ತೇಜೋವಧೆ ಆಗಿದೆ. ವೈಯಕ್ತಿಕ ಕಾರಣಕ್ಕಾಗಿ, ಆಕಸ್ಮಿಕ ಅಂತ ಹೇಳುತ್ತಾರೆ. ಸರಕಾರ ಕಠಿಣ ಕ್ರಮ ಕೈಗೊಂಡರೆ ಅಲ್ಪಸಂಖ್ಯಾಕರಿಗೆ ನೋವಾಗುತ್ತದೆ ಎಂದು ಸರಕಾರ ನಡೆದುಕೊಳ್ಳುತ್ತಿದೆ. ಹಾಗಾದರೆ ಕಾನೂನು ಸುವ್ಯವಸ್ಥೆ ಯಾರು ಕಾಪಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ಇಂಥ ಘಟನೆಗಳು ನಡೆಯುತ್ತಿವೆ. ಅಲ್ಪಸಂಖ್ಯಾಕರನ್ನ ವೋಟ್ ಬ್ಯಾಂಕ್ ಆಗಿ ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿದೆ. ಹಜ್ ಭವನ ಆಗಿದ್ದು ಯಡಿಯೂರಪ್ಪನವರ ಅವ ಧಿಯಲ್ಲಿ, ಅಲ್ಪಸಂಖ್ಯಾತರು ಬಡವರು, ಬಡವರಾಗಿಯೇ ಉಳಿದುಕೊಳ್ಳಲು ಕಾಂಗ್ರೆಸ್ ಕಾರಣ ಎಂದರು.
ಬರ ಪರಿಹಾರಕ್ಕೆ ಕೇಂದ್ರದಿಂದ ಹಣ ಬಿಡುಗಡೆ:
ಶಿವಮೊಗ್ಗ: ಬರ ಪರಿಹಾರವಾಗಿ ಕೇಂದ್ರ ಹಣ ಬಿಡುಗಡೆ ಆಗಿದೆ. ಅದೇ ಹಣವನ್ನು ರಾಜ್ಯ ಸರರ ಕೊಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹೀರಾತು ಮೂಲಕ ಪ್ರಧಾನಿ ಬಗ್ಗೆ ಅಪ್ರಚಾರ ಮಾಡುತ್ತಿದೆ. ಬಿಜೆಪಿ ಕೂಡ ರಾಜ್ಯಕ್ಕೆ ಏನು ಕೊಟ್ಟಿದೆ ಅಂತ ಜಾಹೀರಾತು ನೀಡಿದೆ ಎಂದರು.