ಪಾವಗಡ: ಹೊರಗಿನಿಂದ ನೋಡಿದರೆ ರೈಲು ಕಾಣಿಸುತ್ತದೆ. ಕಿಟಕಿ ಬಾಗಿಲುಗಳೂ ಇವೆ. ಆದರೆ, ಹತ್ತಲು ಆಗಲ್ಲ. ಇಳಿಯಲೂ ಆಗಲ್ಲ! ಹೌದು, ಗಡಿನಾಡು ಪಾವಗಡ ತಾಲೂಕಿನ ಮುಗದಾಳಬೆಟ್ಟ ಗ್ರಾಮದ ಸರ್ಕಾರಿ ಶಾಲೆ ಗೋಡೆ ಮೇಲೆ ಬರೆದಿರುವ ರೈಲಿನ ಚಿತ್ತಾರ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುತ್ತಿದೆ.
ಅಧಿಕಾರಿಗಳ ಮೆಚ್ಚುಗೆ: ಗಡಿನಾಡು ಗ್ರಾಮೀಣ ಯುವ ಪ್ರತಿಭೆ ವಿಜಯ್ ಪಾಳೇಗಾರ ಕೈಚಳಕದಿಂದ ಶಾಲೆಯ ಗೋಡೆಗಳಿಗೆ ರೈಲನ್ನು ಹೋಲುವಂತಹ ಪೇಯಿಂಟ್ ಮಾಡಲಾಗಿದೆ. ಕನ್ನಡಚಲನಚಿತ್ರ ನಿರ್ದೇಶನ ಮಾಡಿರುವ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದವರು.
ದಾನಿಗಳ ಸಹಾಯದಿಂದ ತಾಲೂಕಿನ ದೇವಲಕೆರೆ ,ಲಿಂಗದಹಳ್ಳಿ,ಕಾರನಾಯಕನಹಟ್ಟಿ, ಗೊಲ್ಲರಹಟ್ಟಿ ಶಾಲೆಗಳ ನಲಿ ಕಲಿ ಕೊಠಡಿಗಳಿಗೆ ಹೊಸರೂಪ ನೀಡಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.
ಸಹಕಾರವಿದೆ: ಮುಗದಾಳಬೆಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸ್ಥಳೀಯ ಗ್ರಾಪಂ ಸದಸ್ಯ ಮಹೇಶ್ ಅವರ ಸಹಾಯದೊಂದಿಗೆ ತಾಲೂಕಿನಲ್ಲಿ ಪ್ರಥಮ ಟ್ರೈನ್ ಶಾಲೆ ಮಾಡಿದ್ದಾರೆ. ದೂರದಿಂದ ನೋಡಿದರೆ ರೈಲು ಎಂಜಿನ್, ಬೋಗಿಗಳು ರೈಲು ನಿಲ್ದಾಣದಲ್ಲಿವೆ ಎಂಬ ಭಾವನೆ ಬರುತ್ತದೆ. ಶಾಲೆಗೆ ಹೊಸ ರೂಪ: ಶಾಲೆ ಕೊಠಡಿಗಳ ಬಾಗಿಲುಗಳು ರೈಲುಬೋಗಿಯ ಬಾಗಿಲಾಗಿವೆ. ಕಡಿಮೆ ಖರ್ಚಿನಲ್ಲಿ ಸರ್ಕಾರಿ ಶಾಲೆಗಳಿಗೆ ವಿಜಯ್ ಪಾಳೇಗಾರ ತಂಡ ಹೊಸ ರೂಪ ನೀಡುತ್ತಿದೆ.ಅಲ್ಲದೇ, ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಇದೇ ರೀತಿ ಆಕರ್ಷಣೀಯವಾಗಿ ಮಾಡಿದರೆ ಮಕ್ಕಳು ಕಾನ್ವೆಂಟ್‌ಗೆ ಹೋಗುವ ಬದಲು ಸರ್ಕಾರಿ ಶಾಲೆಗೆ ಸೇರಲು ಇಷ್ಟು ಪಡುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕೋವಿಡ್ ಸಮಯದಲ್ಲಿ ಬೆಂಗಳೂರಿನಲ್ಲಿ ಇರುವ ಬದಲು ನಮ್ಮ ಸ್ನೇಹಿತರ ಜತೆಗೂಡಿತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ದಾನಿಗಳ ಸಹಾಯದಿಂದ ಕಡಿಮೆ ಖರ್ಚಿನಲ್ಲಿ ಚಿತ್ರಗಳನ್ನು ಬಿಡಿಸಿ ಶಾಲೆ ಗಳಿಗೆ ಹೊಸರೂಪ ನೀಡಲಾಗುತ್ತಿದೆ. ಸರ್ಕಾರಿ ಶಾಲೆ ಗಳತ್ತ ಮಕ್ಕಳು ಆಕರ್ಷಕರಾಗಲಿ ಎಂಬುದು ನಮ್ಮ ಆಸೆ.
-ವಿಜಯ್ ಪಾಳೇಗಾರ್, ಕುಂಚಕಲಾವಿದ
ತಾಲೂಕಿನ ಯುವ ಪ್ರತಿಭೆ ವಿಜಯ್ ಪಾಳೇಗಾರ ಅವರು ಕೋವಿಡ್ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಅತಿ ಕಡಿಮೆ ಖರ್ಚಿನಲ್ಲಿ ಹೊಸರೂಪ ನೀಡುತ್ತಿದ್ದಾರೆ. ಎಲ್ಲಾ ಗ್ರಾಮಗಳಲ್ಲಿಯೂ ದಾನಿಗಳು ಮುಂದರೆ ಸರ್ಕಾರಿ ಶಾಲೆಗಳಿಗೆ ಹೊಸ ನೀಡುತ್ತಾರೆ.
-ಲೋಕೇಶ್ ಪಾಳೇಗಾರ, ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷರು, ಪಾವಗಡ
-ಸಂತೋಷ್ ಕುಮಾರ್