ಹಾಲಾಡಿ: ತೀರಾ ಗ್ರಾಮೀಣ ಭಾಗವಾದ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿ ಗ್ರಾಮದ ನಡಂಬೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಶಿಕ್ಷಕರೇ ಇಲ್ಲದ ಶೂನ್ಯ ಶಾಲೆಯಾಗಿದೆ. ಇಲ್ಲಿಗೆ ಈ ಸಾಲಿನಲ್ಲಿ ಇಲಾಖೆಯಿಂದ ವಾರಕ್ಕೆರಡು ದಿನ ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಿದರೂ, ಅವರಿನ್ನೂ ಈ ಶಾಲೆಗೆ ಬಂದೇ ಇಲ್ಲ.
ಕುಂದಾಪುರ ವಲಯದ ನಡಂಬೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಬೇರೊಂದು ಶಾಲೆಯಿಂದ ಇಲ್ಲಿಗೆ ಶಿಕ್ಷಕರೊಬ್ಬರನ್ನು ಪ್ರಭಾರ ನೆಲೆಯಲ್ಲಿ ನಿಯೋಜಸಲಾಗಿತ್ತು. ಆದರೆ ಈ ಬಾರಿ ಅವರು ಬೇರೆಡೆಗೆ ವರ್ಗವಾಗಿದ್ದು, ಈಗ ಈ ಶಾಲೆಯಲ್ಲಿ ಖಾಯಂ ಶಿಕ್ಷಕರೇ ಇಲ್ಲ. ಈಗಿರುವುದು ಕೇವಲ ಗೌರವ ಶಿಕ್ಷಕಿ ಮಾತ್ರ.
ದಾಖಲಾತಿಗೂ ತೊಂದರೆ: ಇಲ್ಲಿ ಖಾಯಂ ಶಿಕ್ಷಕರಿಲ್ಲದೆ ಈ 2022-23ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ಇದರಿಂದ ಈ ಬಾರಿಯ ದಾಖಲಾತಿಯು ಕುಂಠಿತಗೊಂಡಿದೆ. ಸದ್ಯ ಶಾಲೆಯಲ್ಲಿ 16 ಮಕ್ಕಳಿದ್ದು, ಒಬ್ಬರೇ ಗೌರವ ಶಿಕ್ಷಕಿಯಿದ್ದಾರೆ.
ಇದರಿಂದಾಗಿ ಪಾಠ- ಪ್ರವಚನಕ್ಕೆ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಕಳೆದ 3 ವರ್ಷಗಳಿಂದ ಈ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಅಲ್ಲಿಂದೀಚೆಗೆ ಇಲ್ಲಿಗೆ ಬೇರೊಂದು ಶಾಲೆಯ ಶಿಕ್ಷಕರನ್ನು ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗುತ್ತಿದೆ. 2 ಶಿಕ್ಷಕ ಹುದ್ದೆಗಳು ಖಾಲಿಯಿವೆ.
ಒಬ್ಬರ ನಿಯೋಜನೆ: ಈ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯನ್ನು ಶೂನ್ಯ ಶಿಕ್ಷಕರಿರುವ ಶಾಲೆಯೆಂದು ಗುರುತಿಸಿ, 2022-23ನೇ ಸಾಲಿನಲ್ಲಿ ಇಲ್ಲಿಗೆ ಬೆಪ್ಡೆ ಶಾಲೆಯ ಶಿಕ್ಷಕಿಯೊಬ್ಬರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ವಾರದಲ್ಲಿ 2 ದಿನ (ಸೋಮವಾರ ಹಾಗೂ ಗುರುವಾರ) ಈ ಶಾಲೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮೇ 30ರಂದು ಆದೇಶ ಹೊರಡಿಸಿದ್ದರು. ಆದರೆ ನಿಯೋಜನೆಗೊಂಡ ಶಿಕ್ಷಕಿ ಈ ಶಾಲೆಗೆ ಒಂದು ದಿನವೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಇದರಿಂದ ಮಕ್ಕಳಿಗೆ ಮಾತ್ರ ನಿತ್ಯವೂ ತೊಂದರೆಯಾಗುತ್ತಿದೆ.
ಶೀಘ್ರ ಕ್ರಮ: ನಡಂಬೂರು ಶಾಲೆಗೆ ಮುಖ್ಯ ಶಿಕ್ಷಕರ ನೆಲೆಯಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಶಿಕ್ಷಕಿಯಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿದೆ. ಇವರು ಅಲ್ಲಿಗೆ ಬರದ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು. -ಅರುಣ್ ಕುಮಾರ್ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ
ಸುದಿನ ವರದಿ:
ನಡಂಬೂರು ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೆ ಬಗ್ಗೆ “ಉದಯವಾಣಿ ಸುದಿನ’ವು 2022ರ ಎ. 4ರಂದು ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಆ ಬಳಿಕ ಕಳೆದ ಮೇಯಲ್ಲಿ ಶಿಕ್ಷಣಾಧಿಕಾರಿಗಳು ಪ್ರಭಾರ ನೆಲೆಯಲ್ಲಿ ಶಿಕ್ಷಕಿಯೊಬ್ಬರನ್ನು ನಿಯೋಜಿಸಿ ಆದೇಶ ಹೊರಡಿಸಿದ್ದರು. ಆದರೆ ಆ ಶಿಕ್ಷಕಿ ಮಾತ್ರ ಇನ್ನೂ ಶಾಲೆಗೆ ಬಂದಿಲ್ಲ.