ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಡಿವೈಎಸ್ಪಿ, ಎಎಸ್‌ಐ ಹಾಗೂ ಹೆಡ್‌ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿಗೆ ಹಾಕಿಕೊಳ್ಳಲಾಗಿರುವ ಕಾಲಮಿತಿ ವೇಳಾ ಪಟ್ಟಿಯ ವಿವರಗಳನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.
ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿ ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಸರ್ಕಾರದ ಪರ ವಕೀಲರಾದ ವಿ. ಶ್ರೀನಿಧಿಯವರು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ಸುಶೀಲಾ ಅವರು ಸಲ್ಲಿಸಿದ ಮೆಮೋ, ಕಾರ್ಯ ಪಾಲನಾ ವರದಿ ಹಾಗೂ ಮುಂದಿನ ವೇಳಾ ಪಟ್ಟಿ ವಿವರಗಳನ್ನು ನ್ಯಾಯಪೀಠಕ್ಕೆ ಹಾಜರುಪಡಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯ ಪೀಠ, ಖಾಲಿ ಹುದ್ದೆಗಳ ಭರ್ತಿ ವಿಚಾರದಲ್ಲಿ ಗಣನೀಯ ಪ್ರಗತಿ ಆಗುತ್ತಿದೆ. ಈ ಕುರಿತ ಮುಂದಿನ ಕಾರ್ಯ ಪ್ರಗತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿತು.
ಪ್ರಮಾಣಪತ್ರದಲ್ಲಿ ಹೇಳಿದ್ದು: 2018-19ನೇ ಸಾಲಿನ ಸಬ್ ಇನ್ಸ್‌ಪೆಕ್ಟರ್ ದರ್ಜೆಯ 346 ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಗೊಂಡ ಅಭ್ಯರ್ಥಿ ಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, 2020ರ ಫೆ.10ರಿಂದ ತರಬೇತಿ ಆರಂಭಗೊಳ್ಳಲಿದೆ. ಇದೇ ಸಾಲಿನ 5,185 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು 2020 ಮಾರ್ಚ್ ವೇಳೆಗೆ ನೇಮಕಾತಿ ಆದೇಶ ನೀಡಲಾಗುವುದು.
2019-20ನೇ ಸಾಲಿನ 61 ಪಿಎಸ್‌ಐ, 4540 ಪೊಲೀಸ್ ಕಾನ್ಸ್‌ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆ ಯನ್ನು 2020ರ ಮಾರ್ಚ್‌ಗೆ ಪೂರ್ಣಗೊಳಿಸ ಲಾಗುವುದು. 2020-21ನೇ ಸಾಲಿನಲ್ಲಿ 592 ಪಿಎಸ್‌ಐ, 4 ಸಾವಿರ ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿಯನ್ನು 2021ರ ಮಾರ್ಚ್ ವೇಳೆಗೆ ಹಾಗೂ 2021-22ನೇ ಸಾಲಿನ 534 ಪಿಎಸ್‌ಐ, 506 ಪೊಲೀಸ್ ಕಾನ್ಸ್‌ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆ ಯನ್ನು 2022ರ ಮಾರ್ಚ್‌ಗೆ ಪೂರ್ಣಗೊಳಿಸಲಾಗುವುದು. ಡಿವೈಎಸ್ಪಿ ಹುದ್ದೆಗಳು ಸೇರಿದಂತೆ ಬಡ್ತಿ ಮೂಲಕ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.