ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ದೇಶದಲ್ಲಿ ಮುಖ್ಯವಾಗಿ ವಾಣಿಜ್ಯ ನಗರಿ ಮುಂಬೈ, ಪುಣೆ, ಇಂದೋರ್, ಜೈಪುರ್, ಕೋಲ್ಕತಾ ಹಾಗೂ ಪಶ್ಚಿಮಬಂಗಾಳದ ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಪರಿಣಾಮ ತುಂಬಾ ಗಂಭೀರ ಪರಿಸ್ಥಿತಿಗೆ ತಲುಪುವಂತಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಮಧ್ಯಪ್ರದೇಶದ ಇಂದೋರ್, ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ, ರಾಜಸ್ಥಾನದ ಜೈಪುರ್ ಹಾಗೂ ಪಶ್ಚಿಮಬಂಗಾಳದ ಕೋಲ್ಕತಾ, ಹೌರಾ, ಪಶ್ಚಿಮ ಮಿಡ್ನಾಪುರ್, ಉತ್ತರ 24 ಪರಾಗಣ್, ದಾರ್ಜಿಲಿಂಗ್, ಕಾಲಿಂಪೋಂಗ್, ಜಲ್ ಪೈಗುರಿಯಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಗೃಹ ಸಚಿವಾಲಯ ವಿವರಿಸಿದೆ.
ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಹೆಲ್ತ್ ಕೇರ್ ಪ್ರೊಫೆಷನಲ್ಸ್ ವಿರುದ್ಧ ಹಲ್ಲೆ ಪ್ರಕರಣ, ಸಾಮಾಜಿಕ ಅಂತರದ ಕಡೆಗಣನೆ, ನಗರ ಪ್ರದೇಶದಲ್ಲಿ ವಾಹನಗಳ ಓಡಾಟ ನಡೆಯುತ್ತಿದ್ದು, ಮೊದಲು ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚನೆ ರವಾನಿಸಿದೆ.
ಭಾರತದಲ್ಲಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 543ಕ್ಕೆ ತಲುಪಿದೆ, ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 17,265ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ 4203ಮಂದಿಗೆ ಕೋವಿಡ್ 19 ವೈರಸ್ ದೃಢಪಟ್ಟಿದೆ, 223 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಮಧ್ಯಪ್ರದೇಶದಲ್ಲಿ 1407 ಮಂದಿ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 70 ಜನರು ಸಾವನ್ನಪ್ಪಿದ್ದಾರೆ, ರಾಜಸ್ಥಾನದಲ್ಲಿ 1478 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ. ಪಶ್ಚಿಮಬಂಗಾಳದಲ್ಲಿ 339 ಮಂದಿಗೆ ಸೋಂಕು ದೃಢಪಟ್ಟಿದ್ದು, 12 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.