ಹೊಸದಿಲ್ಲಿ: ಭಾರತ – ಉಕ್ರೇನ್ ನಡುವೆ ಸಂಚರಿಸುವ ವಿಮಾನಗಳಿಗೆ ವಿಧಿಸಲಾಗಿದ್ದ ಮಿತಿಯನ್ನು ಭಾರತ ರದ್ದುಗೊಳಿಸಿದೆ. ಇದರ ಜತೆಗೆ ವಿಮಾನಗಳಲ್ಲಿ ಪ್ರಯಾಣಿಕರಿಗೆ ವಿಧಿಸಲಾಗಿದ್ದ ಆಸನಗಳ ಮಿತಿಯನ್ನೂ ತೆಗೆದುಹಾಕಲಾಗಿದೆ.
“ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯರನ್ನು ತತ್‌ಕ್ಷಣವೇ ತೆರವುಗೊಳಿಸುವ ಆಲೋಚನೆ ಸದ್ಯಕ್ಕಿಲ್ಲ. ಆದರೂ, ಅವರ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಭಾರತ ಹೇಳಿದೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ನಡೆಯುವ ಭೀತಿ ಆವರಿಸಿರುವುದರಿಂದ ಉಕ್ರೇನ್‌ನಲ್ಲಿರುವ ಭಾರತೀಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾರತಕ್ಕೆ ಆದಷ್ಟು ಬೇಗನೇ ಆಗಮಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ, ಕೊರೊನಾ ನಿಬಂಧನೆಗಳನ್ವಯ, ಎರಡು ದೇಶಗಳ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿತ್ತು.
ಅಮೆರಿಕ ವಿಶ್ವಾಸ: ರಷ್ಯಾ- ಉಕ್ರೇನ್ ಯುದ್ಧ ಆರಂಭವಾದರೆ ಭಾರತ, ತನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ವಿಶ್ವಾಸವನ್ನು ಅಮೆರಿಕ ವ್ಯಕ್ತಪಡಿಸಿದೆ.
ಹೆಚ್ಚುವರಿ 7 ಸಾವಿರ ತುಕಡಿ: ಉಕ್ರೇನ್ ಗಡಿಯಲ್ಲಿ ತಾನು ನಿಯೋಜಿಸಿರುವ ಸೇನೆಗೆ ಹೆಚ್ಚುವರಿಯಾಗಿ 7 ಸಾವಿರ ಸೇನಾ ತುಕಡಿಗಳನ್ನು ರಷ್ಯಾ ನಿಯೋಜಿಸಿದೆ ಎಂದು ಅಮೆರಿಕ ಹೇಳಿದೆ. ಇತ್ತೀಚೆಗೆ, ಉಕ್ರೇನ್ ಗಡಿಯಿಂದ ತನ್ನ ಸೇನೆಯನ್ನು ಹಂತಹಂತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುತ್ತಿರುವು ದಾಗಿ ರಷ್ಯಾ ಪ್ರಕಟಿಸಿತ್ತು. ಇದರ ಹೊರತಾಗಿಯೂ ಮತ್ತಷ್ಟು ಸೇನಾ ತುಕಡಿಗಳನ್ನು ಗಡಿಯಲ್ಲಿ ನಿಯೋಜಿಸಲಾಗಿದೆ ಎಂದು ಅಮೆರಿಕ ಹೇಳಿದೆ.