Advertisement

ತೊಗರಿ ಪ್ರೋತ್ಸಾಹ ಧನ ನಿಗದಿಗೆ ಸರ್ಕಾರದ ಮೀನಾಮೇಷ: ಕಾಂಗ್ರೆಸ್ ಆಕ್ರೋಶ

04:36 PM Dec 28, 2020 | keerthan |

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಪ್ರಸಕ್ತವಾಗಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನಿಗದಿ ಮಾಡದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Advertisement

ತೊಗರಿಗೆ ರಾಜ್ಯ ಸರ್ಕಾರ ಕೇಂದ್ರದ ಬೆಂಬಲ ಬೆಲೆಗೆ ತನ್ನ ಪ್ರೋತ್ಸಾಹ ನೀಡುತ್ತಾ ಬಂದಿದೆ, ಆದರೆ ಪ್ರಸಕ್ತವಾಗಿ ನಯಾಪೈಸೆ ನೀಡದೇ ಶೋಷಣೆ ಎಸಗಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ನೆಲೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಬಲ ಬೆಲೆಯಲ್ಲಿ ಖರೀದಿ ಆರಂಭವಾದ ವರ್ಷದಿಂದ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಾ ಬಂದಿದೆ. ಆದರೆ ರೈತರ ಸರ್ಕಾರ ಎನ್ನುವ ರಾಜ್ಯ ಬಿಜೆಪಿ ಸರ್ಕಾರವೇ ರೈತರಿಗೆ ಬರೆ ಎಳೆದಿದೆ. ಪ್ರಸಕ್ತವಾಗಿ ಮೊದಲೇ ಶತಮಾನದ ಮೇಘಸ್ಫೋಟದಿಂದ ಅರ್ಧಕ್ಕಿಂತ ಹೆಚ್ಚಿನ ತೊಗರಿ ಹಾನಿಯಾಗಿದೆ. ಇಂತಹುದರಲ್ಲಿ ಪ್ರೋತ್ಸಾಹ ಧನ ನೀಡದೇ ಇರುವ ಧೋರಣೆಯಿಂದ ಹೊರ ಬಂದು ಈ ಕೂಡಲೇ ಕನಿಷ್ಟ ಕೇಂದ್ರದ 6000 ರೂ. ಬೆಂಬಲ ಬೆಲೆಗೆ 1500 ರೂ ಪ್ರೋತ್ಸಾಹ ಧನ ನಿಗದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬ್ರಿಟಿಷ್ ರಿಗೆ ಮುಚ್ಚಳಿಕೆ ಬರೆದುಕೊಟ್ಟ ಬಿಜೆಪಿಯವರದ್ದು ದೇಶ ಭಕ್ತಿಯಾ? ಸಿದ್ದರಾಮಯ್ಯ

ತೊಗರಿ ಖರೀದಿ ಕೇಂದ್ರ ಆರಂಭ ಎನ್ನಲಾಗಿದೆ. ಆದರೆ ಎಲ್ಲೂ ಖರೀದಿಯೇ ಆರಂಭವಾಗಿಲ್ಲ. ಈಗಾಗಲೇ ಕಟಾವು ಶುರುವಾಗಿದೆ. ಹೊಸ ತೊಗರಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರು ಕಲಬುರಗಿಯನ್ನೇ ಮರೆತ್ತಿದ್ದಾರೆ. ಹೊಸ ವರ್ಷದಂದು ಬರ್ತಾರೆಂದು ಹೇಳಲಾಗುತ್ತಿದೆ. ಕಲಬುರಗಿಗೆ ಬರುವಾಗ ತೊಗರಿಗೆ ಪ್ರೋತ್ಸಾಹ ಧನ ಪ್ರಕಟಿಸಿಯೇ ಬರಬೇಕು. ಖಾಲಿ ಕೈಯಲ್ಲಿ ಬರುವುದಾದರೆ ಬರದಿರುವುದೇ ಒಳಿತು. ಏನಾದರೂ ಜಿಲ್ಲೆ ಹಾಗೂ ತೊಗರಿ ಮೇಲೆ ಕಾಳಜಿಯಿದ್ದರೆ ತೊಗರಿ ಕ್ವಿಂಟಾಲ್ ಗೆ 7500 ರೂ.ದಲ್ಲಿ ಖರೀದಿ ಮಾಡಲಿ ಎಂದು ಡಾ. ಅಜಯಸಿಂಗ್, ಅಲ್ಲಮಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.

Advertisement

ಬಾಯಿ ಬಿಡದ ಬಿಜೆಪಿಗರು: ತೊಗರಿಗೆ ಪ್ರೋತ್ಸಾಹ ಧನ ನೀಡದಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಬಿಜೆಪಿಯ ಯಾವೊಬ್ಬ ಜನಪ್ರತಿನಿಧಿ ಬಾಯಿ ಬಿಡುತ್ತಿಲ್ಲ. ಇದನ್ನು ನೋಡಿದರೆ ರೈತರ ಹಿತಾಸಕ್ತಿ ಬೇಕಿಲ್ಲ ಎಂಬುದಾಗಿ ನಿರೂಪಿಸುತ್ತದೆ ಎಂದಿದ್ದಾರೆ.

ಅತಿವೃಷ್ಟಿ ಹಾನಿಗೆ ಪರಿಹಾರ ಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ನಯಾ ಪೈಸೆ ಪರಿಹಾರ ನೀಡಿಲ್ಲ. ಕಿಸಾನ ಸಮ್ಮಾನ್ ಯೋಜನೆ ಅಡಿ ನೀಡಲಾಗುವ 2000 ರೂ ಪ್ರೋತ್ಸಾಹ ಧನಕ್ಕೆ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ದ ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಜನರು ತಿರುಗಿ ಬಿದ್ದಿದ್ದರಿಂದ ಸರ್ಕಾರಗಳಿಗೆ ದಿಕ್ಕೇ ತೋಚುತ್ತಿಲ್ಲ ಎಂದಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ತೊಗರಿ ಪ್ರೋತ್ಸಾಹ ಧನಕ್ಕಾಗಿ ಸಿಎಂ ಬಳಿ ನಿಯೋಗ ಹೋಗುವುದಾಗಿ ಹೇಳಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ನಿಯೋಗದ ನೆಪ ಹೇಳಿದ್ದಾರೆ. ಪ್ರತಿವರ್ಷ ತೊಗರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುತ್ತಾ ಬರಲಾಗಿದೆ. ಆದರೆ ಇದೇ ವರ್ಷ ನೀಡ್ತಾ ಇಲ್ಲ. ಹೀಗಾಗಿ ನೀಡಲೇಬೇಕೆಂದು ಸಿಎಂಗೆ ಹಾಗೂ ಕೃಷಿ ಸಚಿವರಿಗೆ ಹತ್ತು ದಿನಗಳ ಹಿಂದೆಯೇ ಭೇಟಿಯಾಗಬೇಕಿತ್ತು. ಬಿಜೆಪಿ ಶಾಸಕರಿಗೆ ರೈತರ ಹಿತಾಸಕ್ತಿ ಬೇಕಿಲ್ಲ. ಏನಿದ್ದರೂ ವೈಯಕ್ತಿಕ ಲಾಭದ ಕಡೆ ಆಸಕ್ತಿ ಕಡೆ ಲಕ್ಷ್ಯ ವಹಿಸಿದ ಪರಿಣಾಮ ಕಲ್ಯಾಣ ಕರ್ನಾಟಕ ಸಮಸ್ಯೆ ಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತಾಗಿದೆ ಎಂದಿದ್ದಾರೆ.

ದಿವಾಳಿ ಸರ್ಕಾರ: ರಾಜ್ಯ ಸರ್ಕಾರ ದಿವಾಳಿಯಾಗಿದ್ದರಿಂದಲೇ ತೊಗರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಅದೇ ರೀತಿ ಇತರ ಯೋಜಬೆಗಳಿಗೆ ಅನುದಾನ ನೀಡುತ್ತಿಲ್ಲ. ಚುನಾವಣೆಗಳಿಗೆ ತೋರುವ ಕಾಳಜಿ ಅಭಿವೃದ್ಧಿ ಕಾರ್ಯಗಳಿಗೆ ಆಸಕ್ತಿ ತೋರುತ್ತಿಲ್ಲ ಎಂದು ಡಾ.‌ಅಜಯಸಿಂಗ್ ಹಾಗೂ ಅಲ್ಲಮಪ್ರಭು ಪಾಟೀಲ್ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next