ಬೆಂಗಳೂರು: ಮುಖ್ಯಮಂತ್ರಿಗಳು ಕಳ್ಳರ ರಕ್ಷಣೆಯಲ್ಲಿ ತೊಡಗಿದ್ದರು. ಈಗಾಗಲೇ ಸಂತೋಷ್ ಪಾಟೀಲ ಸಾವಿಗೆ ಈಶ್ವರಪ್ಪ ಅವರು ಕಾರಣ ಎಂದು ಹೇಳಿದ್ದಾರೆ. ಕೊಡಲೇ ಈಶ್ವರಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಯೂಥ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೋಮುಗಲಬೆ ಸೃಷ್ಟಿಕರ್ತ ಈಶ್ವರಪ್ಪ. ಈ ಹಿಂದೆಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಬೊಮ್ಮಾಯಿ ಬದಲಾವಣೆ ಸಂಬಂಧ ವರಿಷ್ಠರನ್ನು ಒತ್ತಾಯಿಸಿದ್ದರು. ಶಿವಮೊಗ್ಗವನ್ನು ಹೊತ್ತಿ ಉರಿಯುವಂತೆ ಮಾಡಿದ್ದ ಇಂತಹ ವ್ಯಕ್ತಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
5% ಪರ್ಸೆಂಟ್ ಕಮಿಷನ್ ಮುಖ್ಯಮಂತ್ರಿಗಳಿಗೂ ಹೋಗುತ್ತಿದೆ ಎಂಬ ಮಾತಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಈಶ್ವರಪ್ಪ ಅವರನ್ನು ರಕ್ಷಣೆ ಮಾಡುತ್ತಿರುವುದನ್ನು ನೋಡಿದರೆ ಸತ್ಯ ಎಂದು ಅನಿಸುತ್ತಿದೆ ಎಂದರು.
ಇದನ್ನೂ ಓದಿ:ಪ್ರಾಥಮಿಕ ತನಿಖೆ ಆಗುವವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯಲ್ಲ: ಸಿಎಂ ಬೊಮ್ಮಾಯಿ
ಈ ಹಿಂದೆ ಗಣಪತಿ ಪ್ರಕರಣದಲ್ಲಿ ಈಶ್ವರಪ್ಪ ಅವರು ಜಾರ್ಜ್ ಅವರ ರಾಜೀನಾಮೆ ಕೇಳಿ ಗದ್ದಲ ಎಬ್ಬಿಸಿದ್ದರು. ಈಗ ಅದೇ ರೀತಿಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಲಿ ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.