ಬೆಂಗಳೂರು: ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ರಾಜ್ಯದ ಕೆಲವು ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಇದೆಯೋ ಅಂಥಹ ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಟ್ ಸ್ಪಾಟ್ ಎಂದು ಗುರುತಿಸಿದೆ.
ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಬೆಂಗಳೂರು ನಗರದಲ್ಲಿ ಇದುವರೆಗೆ 71 ಸೋಂಕು ಪ್ರಕರಣಗಳು ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 35 ಜನರು ಗುಣಮುಖರಾಗಿದ್ದು, 34 ಸಕ್ರಿಯ ಪ್ರಕರಣಗಳಿವೆ.
ಮೈಸೂರಿನಲ್ಲಿ 58 ಪ್ರಕರಣಗಳಿದ್ದು, 12 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 19 ಪ್ರಕರಣಗಳು ದೃಢವಾಗಿದ್ದು, ಓರ್ವ ಸೋಂಕಿತ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಪ್ರಕರಣಗಳು ದೃಢವಾಗಿದ್ದು, ಎಂಟು ಜನರು ಗುಣಮುಖರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ 13 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 17 ಜನರಿಗೆ ಸೋಂಕು ದೃಢವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ ಮೂರು ಜನರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.
ಬಾಗಲಕೋಟೆಯಲ್ಲಿ 14 ಜನರಿಗೆ ಸೋಂಕು ದೃಢವಾಗಿದ್ದು, ಓರ್ವ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಆರು ಜನರಿಗೆ ಸೋಂಕು ದೃಢವಾಗಿದ್ದು, ಓರ್ವ ಗುಣಮುಖರಾಗಿ ಬಿಡುಗೆಯಾಗಿದ್ದಾರೆ.