Advertisement

ಗಿರಿಜನರ ನಿರ್ಲಕ್ಷ್ಯ: ಐಟಿಡಿಪಿ ಅಧಿಕಾರಿಯ ಅಮಾನತಿಗೆ ಆಗ್ರಹ 

02:13 PM Apr 28, 2017 | Team Udayavani |

ಮಡಿಕೇರಿ:  ಜಿಲ್ಲೆಯ ವಿವಿಧ ಹಾಡಿಗಳಲ್ಲಿ ನೆಲೆಸಿರುವ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯನ್ವಯ ಜಾಗಕ್ಕೆ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡದೆ ಐಟಿಡಿಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಜೆ.ಕೆ. ಪ್ರಕಾಶ್‌ ಆರೋಪಿಸಿದ್ದಾರೆ. ವಾರದ ಒಳಗಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರಿಜನರ ಸಂಕಷ್ಟಗಳ ಬಗ್ಗೆ ಐಟಿಡಿಪಿ ಅಧಿಕಾರಿ ಗಮನ ಹರಿಸುತ್ತಿಲ್ಲ. ಸರಕಾರದಿಂದ ಗಿರಿಜನರ ಅಭ್ಯುದಯಕ್ಕೆ ಪೂರಕವಾಗಿ ಬರುವ ಅನುದಾನದ ಸದ್ಬಳಕೆ ಮಾಡುತ್ತಿಲ್ಲವೆಂದು ಆರೋಪಿಸಿದರು.ಬಾಳೆಗುಂಡಿ ಹಾಡಿಯ 150 ಗಿರಿಜನ ಕುಟುಂಬಗಳಿಗೆ ಹಕ್ಕುಪತ್ರವನ್ನು ಒದಗಿಸ ಲಾಗಿದ್ದು, ಆ ಜಾಗ ತಮಗೆ ಸೇರಿದ್ದೆಂದು ದೇವರ ಬನ ಟ್ರಸ್ಟ್‌ ನ್ಯಾಯಾಲಯದ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಹಾಡಿಯಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕಾರ್ಯ ಗಳಾವುವು ನಡೆಯುತ್ತಿಲ್ಲ. ಸಮಸ್ಯೆಯನ್ನು ಬಗೆಹರಿಸುವಲ್ಲಿ ಐಟಿಡಿಪಿ ಇಲಾಖೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಯಡವನಾಡು ಹಾಡಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಅಲ್ಲಿನ 21 ಗಿರಿಜನ ಕುಟುಂಬಗಳಿಗೆ ಸಂಬಂಧಿಸಿದಂತೆ ತಲಾ 3.80 ಎಕರೆ ಜಾಗದಂತೆ ಜಂಟಿ ಸರ್ವೇ ಕಾರ್ಯವನ್ನು ನಡೆಸಿದ್ದರೂ ಇಲ್ಲಿಯವರೆಗೆ ಅಲ್ಲಿನ ನಿವಾಸಿಗಳ ಅರ್ಜಿಗಳನ್ನು ಇತ್ಯರ್ಥಪಡಿಸಿಲ್ಲ. ಈ ವಿಷಯಗಳ ಬಗ್ಗೆ ಐಟಿಡಿಪಿ ಅಧಿಕಾರಿಯನ್ನು ಸಂಪರ್ಕಿಸಿದಾಗ ನ್ಯಾಯಾಲಯಕ್ಕೆ ಹೋಗುವಂತೆ ಹೇಳುತ್ತಾರೆ. ಬಡವರ್ಗದ ಗಿರಿಜನರು ನ್ಯಾಯಾಲಯದ ಮೊರೆ ಹೊಕ್ಕು ನ್ಯಾಯ ಪಡೆದುಕೊಳ್ಳುವಷ್ಟು ಶಿಕ್ಷಣ ಮತ್ತು ಜ್ಞಾನವನ್ನು ಹೊಂದಿದ್ದಾರೆಯೇ ಎಂದು ಜೆ.ಕೆ. ಪ್ರಕಾಶ್‌ ಪ್ರಶ್ನಿಸಿದರು.

ಹಿತ್ಲುಮನೆ ಹಾಡಿಯಲ್ಲಿ ಏಳು ಕುಟುಂಬಗ‌ಳಿಗೆ ಸಂಬಂಧಿಸಿದಂತೆ 7 ಏಕರೆ ಭೂಮಿ ಸರ್ವೇ ಕಾರ್ಯ ನಡೆದಿದೆ. ಆದರೆ, ಪ್ರಸ್ತುತ ಪ್ರತಿ ಕುಟುಂಬಕ್ಕೆ 3 ಸೆಂಟ್‌ ಜಾಗದ ಹಕ್ಕು ಪತ್ರವನ್ನಷ್ಟೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದ ಅವರು, ಐಟಿಡಿಪಿ ಇಲಾಖಾ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಟೀಕಿಸಿದರು.

ವೇದಿಕೆಯ ಸಂಚಾಲಕ ಸುಬ್ರಮಣಿ ಮಾತನಾಡಿ, ಹೇರೂರು ಹಾಡಿಯಲ್ಲಿ 93 ಗಿರಿಜನ ಕುಟುಂಬಗಳಿದ್ದು, ಕಳೆೆದ ಒಂದು ದಶಕದ ಅವಧಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಏಳು ಬಾರಿ ಜಾಗದ ಜಂಟಿ ಸರ್ವೇ ಕಾರ್ಯ ನಡೆದಿದೆ. ಆದರೆ ಇಲ್ಲಿಯವರೆಗೆ ಜಾಗದ ಹಕ್ಕುಪತ್ರವನ್ನು ನೀಡಿಲ್ಲವೆಂದು ಆರೋಪಿಸಿದರು. ಮುಂಬರುವ ದಿನಗಳಲ್ಲಿ ನಾವಿರುವ ಜಾಗದಲ್ಲಿ ಮನೆಗಳನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ಇದಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿ, ಸದಸ್ಯರುಗಳಾದ ಜೆ.ಎಚ್‌. ರವಿ, ಗಣೇಶ್‌ ಹಾಗೂ ರಮೇಶ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next