ನವದೆಹಲಿ: ಕೋವಿಡ್ 19 ಮಹಾಮಾರಿ ಜನಸಾಮಾನ್ಯರ ಬದುಕಿನ ಮೇಲೆಯೂ ತೀವ್ರ ಪರಿಣಾಮ ಬೀರಿದೆ ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಬಡಜನರಿಗಾಗಿ 5ರಿಂದ 6 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮನವಿ ಮಾಡಿಕೊಂಡಿದ್ದಾರೆ.
ಇಂಡಿಯಾ ಟುಡೇ ಜತೆ ಮಾತನಾಡಿದ ಚಿದಂಬರಂ, ಕೇಂದ್ರ ಹಾಗೂ ಎಲ್ಲಾ ರಾಜ್ಯಗಳ ಒಟ್ಟು ಬಜೆಟ್ ಖರ್ಚು 70ರಿಂದ 75 ಲಕ್ಷ ಕೋಟಿ ರೂಪಾಯಿಯಾಗಿದ್ದು, ಇದರಲ್ಲಿ ಬಡವರ ನೆರವಿಗಾಗಿ 5ರಿಂದ 6 ಲಕ್ಷ ಕೋಟಿ ರೂಪಾಯಿ ಉಪಯೋಗಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಬಜೆಟ್ ನ 70-75 ಲಕ್ಷ ಕೋಟಿ ರೂಪಾಯಿಯಲ್ಲಿ 5-6 ಲಕ್ಷ ಕೋಟಿಯಷ್ಟು ಹಣವನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ. ಬಡವರಿಗಾಗಿ ವಿಶೇಷವಾಗಿ ಮಾಡಬಹುದಾದ ಕೆಲಸ ಇದಾಗಲಿದೆ ಎಂದು ಆರ್ಥಿಕ ಪರಿಣತ ಚಿದಂಬರಂ ತಿಳಿಸಿದ್ದಾರೆ.
ಕೋವಿಡ್ 19 ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಹಲವಾರು ರಾಜ್ಯ ಸರ್ಕಾರಗಳು ಈಗಾಗಲೇ ತುರ್ತು ನಿಧಿಯಿಂದ ದಿನಗೂಲಿ ನೌಕರರಿಗೆ ನೆರವು ಘೋಷಿಸಿದೆ. ಅಲ್ಲದೇ ಬಡವರಿಗೆ ಹತ್ತು ಅಂಶಗಳ ಕಾರ್ಯವನ್ನು ಹಾಕಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.