Advertisement

ಸಾವಿನಲ್ಲೂ ಸುಳ್ಳು ಹೇಳುತ್ತಿರುವ ಸರ್ಕಾರ: ಈಶ್ವರ್ ಖಂಡ್ರೆ ಕಿಡಿ

04:54 PM May 21, 2021 | Team Udayavani |

ಬೀದರ್: ಕೋವಿಡ್‌ನಿಂದ ನಿತ್ಯ ಸಾವಿರಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಸಾವಿಗೀಡಾಗುತ್ತಿದ್ದಾರೆ, ಆದರೆ, ರಾಜ್ಯ ಸರ್ಕಾರ ಕೆಲವೇ ನೂರು ಜನರ ಲೆಕ್ಕ ನೀಡುತ್ತಾ, ರಾಜ್ಯದ ಜನರನ್ನು ವಂಚಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಂದಾಯ ಸಚಿವ ಅಶೋಕ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬೀದರ್ ನ ಕೋವಿಡ್ ಆಸ್ಪತ್ರೆ ಬ್ರಿಮ್ಸ್ ಒಂದರಲ್ಲಿಯೇ ಏ. 15ರಿಂದ ಮೇ 15 ನಡುವೆ 557 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಇಡೀ ಜಿಲ್ಲೆಯಲ್ಲಿ 141 ಜನರು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಇದು ಹಸಿ ಸುಳ್ಳಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಬ್ರಿಮ್ಸ್ ಆಸ್ಪತ್ರೆಯಲ್ಲಿ ಏ.15ರಿಂದ ಮೇ 14ರವರೆಗೆ ಕೋವಿಡ್ ಚಿಕಿತ್ಸೆಗೆ ದಾಖಲಾಗಿ ಮೃತರ ಹೆಸರು, ಅವರು ಆಸ್ಪತ್ರೆಗೆ ದಾಖಲಾದ ಸಮಯ, ಮೃತಪಟ್ಟ ಸಮಯ ಎಲ್ಲ ವಿವರ ಇರುವ ದಾಖಲೆ ಬಿಡುಗಡೆ ಮಾಡಿದ್ದು, ಸರ್ಕಾರ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯನ್ನು ಮರೆ ಮಾಚುತ್ತಿದೆ. ಸತ್ಯ ಹೇಳಿದರೆ ಜನರು ಭೀತಿಯಿಂದಲಾದರೂ ಮನೆಯಲ್ಲಿ ಇರುತ್ತಾರೆ, ಆಗ ಸೋಂಕಿನ ಸರಪಳಿ ಮುರಿಯಬಹುದು ಎಂದಿದ್ದಾರೆ.

ಮೇ 14ರಂದು ಜಿಲ್ಲೆಯಲ್ಲಿ ಕೋವಿಡ್ ನಿಂದ 6 ಜನರು ಮತ್ತು 15ರಂದು 6 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಬ್ರಿಮ್ಸ್ ಒಂದರಲ್ಲೇ 15ರಂದು 20 ರೋಗಿಗಳು, 15ರಂದು 13 ಜನರು ಸಾವಿಗೀಡಾಗಿದ್ದಾರೆ ಅಂದರೆ ಸರ್ಕಾರ ನೀಡುತ್ತಿರುವ ಅಂಕಿ ಅಂಶ ಸಂಪೂರ್ಣ ಸುಳ್ಳಿನ ಕಂತೆಯಾಗಿದೆ ಎಂದು ಆರೋಪಿಸಿದ್ದಾರೆ.

ಕೇವಲ ಒಂದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು ಇಷ್ಟು ಮರೆ ಮಾಚುವುದಾದರೆ, ರಾಜ್ಯದಲ್ಲಿ ನಿಜವಾಗಿಯೂ ಕೋವಿಡ್ ನಿಂದ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಕಳೆದ ಒಂದು ತಿಂಗಳಲ್ಲಿ ಕನಿಷ್ಠ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಅನುಮಾನ ಇದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಆರೋಪಿಸಿರುವ ಖಂಡ್ರೆ, ಈ ಬಗ್ಗೆ ಪ್ರಶ್ನಿಸಿದರೆ ಮೃತರ ಸಂಖ್ಯೆ ನೀಡಿದಾಗ ಆರ್‌ಟಿಪಿಸಿಆರ್ ವರದಿ ಬಂದಿರಲಿಲ್ಲ ಹೀಗಾಗಿ ಸೇರಿಸಿರಲಿಲ್ಲ ಎಂಬ ಉತ್ತರ ನೀಡುತ್ತಾರೆ. ಸಚಿವರುಗಳು ಕಾಂಗ್ರೆಸ್ ಪಕ್ಷ ದೂಷಿಸುವುದನ್ನು ಬಿಟ್ಟು, ಸತ್ಯಾಂಶವನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದ್ದಾರೆ.

Advertisement

ಸಾವಿನ ದಾಖಲೆ ಒಂದಲ್ಲಾ ಒಂದು ಕಡೆ ಇರುತ್ತದೆ ಎಂಬುದು ನಮಗೂ ಗೊತ್ತು. ಸರ್ಕಾರ, ಪ್ರಾಮಾಣಿಕವಾಗಿದ್ದರೆ, 2019ರಿಂದ 2021 ಮೇ 21ರವರೆಗೆ ರಾಜ್ಯದಲ್ಲಿ ಪ್ರತಿ ತಿಂಗಳು ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ರಾಜ್ಯವಾರು, ಜಿಲ್ಲಾ, ತಾಲೂಕುವಾರು ಮರಣ ನೋಂದಣಿಯ ವಿವರ ಬಹಿರಂಗ ಮಾಡಲಿ, ಆಗ ಸತ್ಯ ತಾನೇ ಹೊರಬರುತ್ತದೆ. ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು, ರಾಜ್ಯದಲ್ಲಿ ಬ್ಲಾಕ್ ಫಂಗಸ್ ಗೆ ಔಷಧಿಯ ಕೊರತೆಯನ್ನು ನಿವಾರಿಸಿ ಇದನ್ನು ತಡೆಗಟ್ಟಲು ನಿರಂತರ ಶ್ರಮವಹಿಸಬೇಕು. ಕೊರೊನಾ ವೈರಸ್ ಮೂರನೇ ಅಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next