Advertisement
ಕೇಂದ್ರ ಸರಕಾರ ಅಮ್ನೆಸ್ಟಿ ಸ್ಕೀಂ ಅನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಿದೆ ಎನ್ನಲಾಗಿದೆ. ಅಂದರೆ ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಚಿನ್ನ ಹೊಂದಿರುವವರು ಅದನ್ನು ಘೋಷಣೆ ಮಾಡಿ, ಅದಕ್ಕೆ ದಂಡ ತೆತ್ತು ಬಂಗಾರವನ್ನು ಸಕ್ರಮ ಮಾಡಿಕೊಳ್ಳಬಹುದು. ಸರಕಾರ ಹೇಳಿದ ಮಿತಿಗಿಂತ ಕಡಿಮೆ ಚಿನ್ನ ಇದ್ದವರಿಗೆ ಇದರಿಂದ ಯಾವುದೇ ಸಮಸ್ಯೆ ಇರಲಾರದು.ಮೂಲಗಳ ಪ್ರಕಾರ ಇಂತಹ ಅಕ್ರಮ ಚಿನ್ನದ ಮೇಲಿನ ತೆರಿಗೆ ದರ ಕೊಂಚ ಹೆಚ್ಚಾಗಿಯೇ ಇರಲಿದೆ ಎಂದು ಹೇಳಲಾಗುತ್ತಿದೆ.
ದೇಶದ ವಿದೇಶೀ ವಿನಿಮಯ ಅತಿ ಹೆಚ್ಚು ಬಳಕೆಯಾಗುವುದು ಪೆಟ್ರೋಲಿಯಂ ಉತ್ಪನ್ನಗಳ ಆಮದು ಮತ್ತು ಚಿನ್ನದ ಖರೀದಿಗಾಗಿ. ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಭಾರತ ಖರೀದಿ ಮಾಡುತ್ತಿದೆ. ಇದರಿಂದ ಡಾಲರ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಕಪ್ಪು ಹಣ ಹೆಚ್ಚಿರುವುದರಿಂದ ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚಿದ್ದು, ಈ ವರೆಗೆ ಇದಕ್ಕೆ ಯಾವುದೇ ಕಡಿವಾಣ ಇರಲಿಲ್ಲ. ಆದ್ದರಿಂದ ಇದು ಆರ್ಥಿಕತೆಯ ಮೇಲೆ ಪೆಟ್ಟುಕೊಡುತ್ತಿದೆ. ಇದಕ್ಕಾಗಿ ಚಿನ್ನದ ಮೇಲಿನ ಅವಲಂಬನೆ, ಆಮದು, ಅಕ್ರಮ ಹೂಡಿಕೆಯನ್ನು ನಿಯಂತ್ರಿಸುವ ಉದ್ದೇಶ ಸರಕಾರದ್ದಾಗಿದೆ. ಮಿತಿ ಎಷ್ಟಿರಬಹುದು?
ಮೂಲಗಳ ಪ್ರಕಾರ 300ರಿಂದ 400 ಗ್ರಾಂ ವರೆಗೆ ಓರ್ವ ವ್ಯಕ್ತಿ ಚಿನ್ನ ಇಟ್ಟುಕೊಳ್ಳಲು ಅವಕಾಶ ನೀಡಲು ಸಾಧ್ಯತೆ ಇದೆ. ಇನ್ನು ಅವಿಭಕ್ತ ಕುಟುಂಬಕ್ಕಾದರೆ ಈ ನೀತಿಯನ್ನು ಇನ್ನಷ್ಟು ಸಡಿಲಿಸಿ ಇಡುವ ಸಾಧ್ಯತೆಯೂ ಇದೆ. ಈಗಾಗಲೇ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಚಿನ್ನದ ಬಾಂಡ್‌ಗಳನ್ನು ಜಾರಿಗೆ ತಂದಿರುವ ಕೇಂದ್ರ ಸರಕಾರ ಇದರಲ್ಲೂ ಮಿತಿ ಹೇರಿತ್ತು. ಆ ಪ್ರಕಾರ, ಒಂದು ವಿತ್ತೀಯ ವರ್ಷದಲ್ಲಿ ಚಿನ್ನದ ಮೇಲಿನ ಹೂಡಿಕೆ ಓರ್ವ ವ್ಯಕ್ತಿಗೆ 500 ಗ್ರಾಂ ಗೆ ಸೀಮಿತ ಮಾಡಿದೆ. ಹಾಗೆಯೇ ಗರಿಷ್ಠ ಹೂಡಿಕೆಯನ್ನು 4 ಕೆ.ಜಿ.ಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ. ಮತ್ತು ಟ್ರಸ್ಟ್‌ಗೆ 20 ಕೆ.ಜಿ. ಎಂದು ನಿಗದಿ ಪಡಿಸಿದೆ.