ಬೆಂಗಳೂರು: ಜನವರಿ1 ರಿಂದ ಎಸ್ ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದ್ದು, ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ. ಆದರೆ, ಹಾಸ್ಟೆಲ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಾಲಾರಂಭಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ನಾತಕ, ಸ್ನಾತಕೋತ್ತರ ಪದವಿ ಆರಂಭಿಸಿರುವ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ್ದರಿಂದ ಕಾಲೇಜುಗಳಲ್ಲಿ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಬಂದಿಲ್ಲ. ಈ ಬಗ್ಗೆ ವಿಶೇಷ ಚರ್ಚೆ ನಡೆಸಿ, ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿಲ್ಲ. ಆದರೆ, ಸೋಂಕು ಸಂಬಂಧಿಸಿದ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ವ್ಯವಸ್ಥೆ ಮಾಡುತ್ತೇವೆ. ಆದರೆ, ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ್ದೇವೆ. ಕೋವಿಡ್ ಪರೀಕ್ಷೆ ಮಾಡಿಸಿಕೊಂಡೇ ಹಾಸ್ಟೆಲ್ ಹೋಗಬೇಕು ಎಂಬ ಸೂಚನೆ ನೀಡಿದ್ದೇವೆ ಎಂದರು.
ಇದನ್ನೂ ಓದಿ:10 ಮತ್ತು 12ನೇ ತರಗತಿ ಆರಂಭದ ದಿನಾಂಕ ಪ್ರಕಟಿಸಿದ ಸಿಎಂ ಯಡಿಯೂರಪ್ಪ
ಶಾಲೆಗೆ ಬರುವುದು ಕಡ್ಡಾಯವಲ್ಲ, ಆನ್ ಲೈನ್ ಅಥವಾ ಆಫ್‌ಲೈನ್ ತರಗತಿಯಲ್ಲೇ ಪಾಲ್ಗೊಳ್ಳಬಹುದು. ಶಾಲೆಗೆ ಹಾಗೂ ವಿದ್ಯಾಗಮಕ್ಕೆ ಬರುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಿದ್ದೇವೆ. ಜ.1 ರಿಂದ 6ರಿಂದ 9ನೇ ತರಗತಿಗೆ ವಿದ್ಯಾಗಮ ಆರಂಭವಾಗಲಿದೆ. 11ನೇ ತರಗತಿ ಜ.14ರಿಂದ ಆರಂಭಿಸಲಿದ್ದೇವೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಜನವರಿ 1 ರಿಂದ ಆರಂಭಕ್ಕೆ ಆರೋಗ್ಯ ಸಹಿತವಾಗಿ ವಿವಿಧ ಇಲಾಖೆಯೂ ಒಪ್ಪಿಗೆ ನೀಡಿದೆ. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳು ಇರುವಂತೆ ನೋಡಿಕೊಂಡು ವಾರಕ್ಕೆ ಮೂರುದಿನ ವಿದ್ಯಾಗಮ ತರಗತಿ ಆಯಾ ತರಗತಿ ಮಾಡಲಿದ್ದೇವೆ. ವಿದ್ಯಾಗಮ ಖಾಸಗಿಯವರು ಮಾಡುವ ನಿರೀಕ್ಷೆಯಿದೆ. ಇದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಪೆಟೆಂಟ್ ಅಲ್ಲ. ಹೀಗಾಗಿ ಖಾಸಗಿಯವರು ವಿದ್ಯಾಗಮ ಮಾಡಬಹುದು ಎಂದರು.