ಹೊಸದಿಲ್ಲಿ : ಔಪಚಾರಿಕ ವಲಯದ ನೌಕರರಿಗೆ ಗ್ರ್ಯಾಚುಯಿಟಿ ಹಣವನ್ನು ಪಡೆಯಲು ಈ ವರೆಗೆ ಇರುವ ಕನಿಷ್ಠ ಐದು ವರ್ಷಗಳ ಸೇವಾವಾಧಿಯನ್ನು ಮೂರು ವರ್ಷಗಳಿಗೆ ಇಳಿಸುವ ಚಿಂತನೆಯನ್ನು ಸರಕಾರ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದರಿಂದ ಲಕ್ಷಾಂತರ ನೌಕರರಿಗೆ ಪ್ರಯೋಜನವಾಗಲಿದೆ. ಅಂತೆಯೇ ಸರಕಾರ 1972ರ ಪೇಮೆಂಟ್ ಆಫ್ ಗ್ರ್ಯಾಚುಯಿಟಿ ಕಾಯಿದೆಗೆ ತಿದ್ದುಪಡಿಯನ್ನು ತರಲು ಮುಂದಾಗಿದೆ.
ಗ್ರಾಚ್ಯುಯಿಟಿ ಪಡೆಯುವ ಸೇವಾವಧಿ ಅರ್ಹತೆಯನ್ನು 5 ರಿಂದ 3 ವರ್ಷಕ್ಕೆ ಇಳಿಸುವ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯ ಉದ್ಯಮ ರಂಗ ಮತ್ತು ಪರಿಣತರಿಂದ ಅಭಿಪ್ರಾಯ, ಪ್ರತಿಕ್ರಿಯೆ ಕೇಳಿದೆ. ಈ ಪ್ರಸ್ತಾವವನ್ನು ಜಾರಿಗೆ ತಂದಲ್ಲಿ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಉದ್ಯಮ ರಂಗ ಮತ್ತು ಪರಿಣತರಿಂದ ಮಾಹಿತಿ, ಅಭಿಪ್ರಾಯ ಕೇಳಿ ಪಡೆದ ತರುವಾಯ ಇದರ ವಿಶ್ಲೇಷಣೆಯನ್ನು ಆಧರಿಸುವ ಪ್ರಸ್ತಾವವನ್ನು ಕೇಂದ್ರ ವಿಶ್ವಸ್ಥ ಮಂಡಳಿಯ ಮುಂದೆ ಇಡಲಾಗುವುದು ಎಂದು ಮಾಧ್ಯಮ ವರದಿ ತಿಳಿಸಿವೆ.
ಇದಲ್ಲದೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ಆಧಾರದಲ್ಲಿ ದುಡಿಯುವ ನೌಕರರಿಗೂ ಗ್ರಾಚ್ಯುಯಿಟಿ ಅರ್ಹತೆಯನ್ನು ದೊರಕಿಸಲು ಸರಕಾರ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ. ಈ ರೀತಿಯ ನೌಕರರು ತಾವು ಸಲ್ಲಿಸುವ ಸೇವಾವಧಿಗೆ ಸಂಬಂಧಪಡುವ ಅನುಪಾತದ ಆಧಾರದ ಮೇಲೆ ಅವರಿಗೆ ಗ್ರಾಚ್ಯುಯಿಟಿ ಸಿಗುವಂತೆ ಮಾಡುವ ಪ್ರಸ್ತಾವವೂ ಸರಕಾರದ ಮುಂದಿದೆ.
1972ರ ಪೇಮೆಂಟ್ ಆಫ್ ಗ್ರ್ಯಾಚುಯಿಟಿ ಕಾಯಿದೆಯನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ, ತಲ ನಿಕ್ಷೇಷಗಳಲ್ಲಿ, ಪ್ಲಾಂಟೇಶನ್, ಬಂದರು, ರೈಲ್ವೇ ಕಂಪೆನಿಗಳಲ್ಲಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಗ್ರಾಚ್ಯುಯಿಟಿ ದೊರಕುವಂತೆ ಮಾಡಲು ಜಾರಿಗೆ ತರಲಾಗಿತ್ತು.
ಕೇಂದ್ರ ಕಾರ್ಮಿಕ ಸಚಿವಾಲಯ ಗ್ರಾಚ್ಯುಯಿಟಿ ಅರ್ಹತೆಯ ಸೇವಾವಧಿಯನ್ನು 5ರಿಂದ 3ಕ್ಕೆ ಇಳಿಸುವ ಚಿಂತನೆಯನ್ನು ನಡೆಸುತ್ತಿದೆಯಾದರೂ ಕಾರ್ಮಿಕ ಸಂಘಟನೆಗಳು ಈ ಕನಿಷ್ಠ ಅವಧಿಯನ್ನು ಇನ್ನಷ್ಟು ಇಳಿಸಬೇಕೆಂದು ಆಗ್ರಹಿಸುತ್ತಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.